ಹಣಕ್ಕಾಗಿ ಪತ್ನಿ ಬೆರಳು ಕತ್ತರಿಸಿ, ಸಿಗರೇಟ್ನಿಂದ ಸುಟ್ಟ ಪಾಪಿ ಪತಿ
ಹುಕ್ಕೇರಿ, ಸೆ.2- ವರದಕ್ಷಿಣೆ ಹಣಕ್ಕಾಗಿ ಕ್ರೂರಿ ಪತಿಯೊಬ್ಬ ತನ್ನ ಹೆಂಡತಿಯ ಬೆರಳುಗಳನ್ನು ಕತ್ತರಿಸಿ ಮುಖವನ್ನೆಲ್ಲಾ ಸಿಗರೇಟ್ನಿಂದ ಸುಟ್ಟಿರುವ ಪೈಶಾಚಿಕ ಘಟನೆಯೊಂದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪುರದಲ್ಲಿ ನಡೆದಿದೆ. ಹಣಕ್ಕಾಗಿ ಮೃಗದಂತೆ ನಡೆದುಕೊಂಡ ಪತಿ ಅರ್ಜುನ ಲೋಕಾಯುಕ್ತ ಕಚೇರಿಯಲ್ಲಿ ಗುಮಾಸ್ತನೂ ಆಗಿದ್ದಾನೆ. ಕಳೆದ ಒಂದೆರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿ ಸುಮಾರು ನಾಲ್ಕೈದು ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು.
ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಒತ್ತಾಯಿಸಿ ತನ್ನ ಪತ್ನಿ ಕಾವೇರಿ (20)ಯ ತಲೆ ಕೂದಲನ್ನು ಕತ್ತರಿಸುವುದು, ಸಿಗರೇಟ್ನಿಂದ ಮುಖವನ್ನೆಲ್ಲಾ ಸುಡುವುದು ಮಾಡಿದ್ದಾನೆ. ಇತ್ತೀಚೆಗೆ ಕುಡಿದು ಬಂದು ಚಾಕುವಿನಿಂದ ಹೆಂಡತಿಯ ಕೈ ಬೆರಳುಗಳನ್ನೇ ಕತ್ತರಿಸಿದ್ದಾನೆ. ಪತಿ ಅರ್ಜುನನ ನಿರಂತರ ಹಿಂಸೆ ತಾಳಲಾರದೆ ಕಾವೇರಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕಾವೇರಿಯ ತಂದೆ-ತಾಯಿ ಕೂಡ ಅಳಿಯ ತಮ್ಮ ಮಗಳಿಗೆ ಚಿತ್ರಹಿಂಸೆ ನೀಡಿದ್ದಾನೆ. ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ನಿತ್ಯವೂ ಪೀಡಿಸುತ್ತಿದ್ದ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.