ಹಣದ ಆಸೆಗೆ ಅಂಗಡಿಯಲ್ಲಿ ಮಲಗಿದ್ದ ವೃದ್ಧೆಯನ್ನು ಕೊಂದಿದ್ದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrest--01

ಬೆಂಗಳೂರು, ಜೂ.21- ಹಣದ ಆಸೆಗಾಗಿ ವೃದ್ಧ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ನೀಲಸಂದ್ರದ ಸಯ್ಯದ್ ನದೀಮ್(22) ಬಂಧಿತ ಕೊಲೆ ಆರೋಪಿ.
ಘಟನೆ ವಿವರ:
ಜೂ.15ರ ರಾತ್ರಿ ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಮತಾನಗರದ ಗುಜರಿ ಅಂಗಡಿ ಯಲ್ಲಿ ಮಲಗಿದ್ದ ಗಜಲಕ್ಷ್ಮಿ (65) ಎಂಬು ವೃದ್ಧೆಯ ಕೊಲೆ ನಡೆದಿತ್ತು. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೃದ್ಧೆಯ ಸೊಸೆ ಕಲಾ ಹಾಗೂ ಮೊಮ್ಮಕ್ಕಳೊಂದಿಗೆ ನೀಲಸಂದ್ರದಲ್ಲಿ ವಾಸಮಾಡಿಕೊಂಡಿದ್ದು, ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಗಜಲಕ್ಷ್ಮಿ ರಾತ್ರಿ ವೇಳೆ ಅಲ್ಲಿಯೇ ಒಂಟಿಯಾಗಿ ಮಲಗುತ್ತಿದ್ದರು.
ಈ ಪ್ರಕರಣದ ತನಿಖಾ ಕಾಲದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದಾಗ ದುಷ್ಕರ್ಮಿಗಳು ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ತಲೆಗೆ ಹೊಡೆದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಕೃತ್ಯ ನಡೆದ ಸ್ಥಳದಲ್ಲಿ ಪುರುಷ ಧರಿಸುವ ಒಂದು ಜೊತೆ ರಕ್ತಸಿಕ್ತ ಚಪ್ಪಲಿ ದೊರೆತಿದ್ದು, ಚಪ್ಪಲಿಯನ್ನು ಮೃತಳ ಸಂಬಂದಿಕರಿಗೆ ತೋರಿಸಲಾಗಿ ಅವು ತಮ್ಮದಲ್ಲವೆಂದು ತಿಳಿಸಿ, ಮೃತಪಟ್ಟಿರುವ ಅಜ್ಜಿಯ ಬಳಿ ಗುಜರಿ ವ್ಯಾಪಾರದ ಹಣ ಹಾಗೂ ಆಕೆ ಸಾಕಿದ್ದ ಮೇಕೆಗಳನ್ನು ಮಾರಾಟ ಮಾಡಿದ್ದ ಹಣ ಸಹಾ ಇತ್ತು ಎಂದು ತಿಳಿಸಿದ್ದರು.

ಕೃತ್ಯ ನಡೆದ ಸ್ಥಳದಲ್ಲಿ ದೊರೆತಿದ್ದ ಚಪ್ಪಲಿಯನ್ನು ಪರಿಶೀಲಿಸಿದಾಗ ಚಪ್ಪಲಿಯ ಮುಂಭಾಗದಲ್ಲಿ ಹಲವಾರು ರಂಧ್ರಗಳಿರುವುದು ಕಂಡು ಬಂದಿತ್ತು, ಇದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಇಂತಹ ರಂಧ್ರಗಳು ವೆಲ್ಡಿಂಗ್ ಮಾಡುವಾಗ ಬರುವಂತಹ ಕಿಡಿಗಳಿಂದ ಆಗುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿತ್ತು. ಈ ನಿಟ್ಟಿನಲ್ಲಿ ಸುತ್ತಮುತ್ತಲಿನ ಸ್ಥಳಗಳಲ್ಲಿ ವೆಲ್ಡಿಂಗ್ ಕೆಲಸ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಜೂ.20ರಂದು ಸೈಯದ್ ನದೀಮ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸ್ಥಳದಲ್ಲಿ ದೊರೆತಿದ್ದ ಚಪ್ಪಲಿ ತನ್ನದೆಂದು ತಿಳಿಸಿಹಣದ ಆಸೆಗೆ ತಾನೇ ಅಜ್ಜಿಯನ್ನು ಕೊಲೆ ಮಾಡಿ 6800ರೂ. ಹಣದ ಸಮೇತ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ಆ ಹಣದಲ್ಲೇ ಹೊಸ ಬಟ್ಟೆ ಮತ್ತು ಶೂಗಳನ್ನು ಖರೀದಿ ಮಾಡಿ ಸ್ನೇಹಿತರೊಂದಿಗೆ ಸೇರಿಕೊಂಡು ಮದ್ಯಪಾನ, ದೂಮಪಾನ ಮಾಡಿ ಹಣ ಖರ್ಚುಮಾಡಿರುತ್ತೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.  ಜೂ.13ರಂದು ಈತ ಕೆಲಸ ಬಿಟ್ಟಿದ್ದು, ಹಲವಾರು ವರ್ಷಗಳಿಂದ ಅಜ್ಜಿ ಇಟ್ಟುಕೊಂಡಿದ್ದ ಗುಜರಿ ಅಂಗಡಿಗೆ ಆಗಾಗ ಬಂದು ತನಗೆ ಸಿಗುತ್ತಿದ್ದ ಕಬ್ಬಿಣ ಮತ್ತು ಇತರೇ ಗುಜರಿ ಸಾಮಾನುಗಳನ್ನು ಮಾರಿ ಹಣವನ್ನು ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಅಜ್ಜಿಯ ಬಳಿ ಹಣವಿರುವ ಚೀಲವನ್ನು ಗಮನಿದ್ದನು.

ಅಂದು ಬೆಳಗಿನ ಜಾವ ಸುಮಾರು 2ಗಂಟೆಯಲ್ಲಿ ಮನೆಯೊಳಗೆ ನುಸುಳಲು ಪ್ರಯತ್ನಿಸಿದಾಗ ಆಕೆಯ ಬಳಿ ಇದ್ದ ಮೇಕೆಗಳು ಶಬ್ದ ಮಾಡಿದ್ದರಿಂದ ವೃದ್ದೆಯು ಎಚ್ಚರಗೊಂಡಿದ್ದನ್ನು ಗಮನಿಸಿ ಮತ್ತೆ ವಾಪಾಸಾಗಿ ಸುಮಾರು 3.30ಕ್ಕೆ ಅಂಗಡಿಯ ಸಮೀಪ ಹೋಗಿ ಪಕ್ಕದಲ್ಲೇ ಇದ್ದ ಒಂದು ಸಿಮೆಂಟ್ ಇಟ್ಟಿಗೆಯನ್ನು ತೆಗೆದುಕೊಂಡು, ಬಾಗಿಲಿಗೆ ಮುಚ್ಚಾಲಾಗಿದ್ದ ಟಾರ್‍ಪಾಲ್‍ನ್ನು ಸರಿಸಿ ಅಜ್ಜಿಯ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯಿಂದ ಬಲವಾಗಿ ಹೊಡೆದಿದ್ದನು.
ನಂತರ ಅಜ್ಜಿ ಕಿರುಚುಕೊಂಡಿದ್ದು ತಕ್ಷಣವೇ ಒಂದು ಕೈಯಿಂದ ಅಜ್ಜಿಯ ಬಾಯಿ ಮುಚ್ಚಿ, ಇನ್ನೊಂದು ಕೈಯಿಂದ ಪಕ್ಕದಲ್ಲೇ ಇದ್ದಂತಹ ಒಂದು ಕಬ್ಬಿಣದ ಸಾಮಾನು ತೆಗೆದುಕೊಂಡು ಅಜ್ಜಿಯ ತಲೆಗೆ ಹೊಡೆ ಕೊಲೆ ಮಾಡಿ ಹಣದೊಂದಿಗೆ ಪರಾರಿಯಾಗಿದ್ದ.

ತದ ನಂತರ ಬೆಳಗಿನ ಜಾವ ಸುಮಾರು 4.30 ಗಂಟೆಗೆ ಮನೆಗೆ ಹೋಗಿ ಯಾರಿಗೂ ತಿಳಿಯದಂತೆ ತಾನು ಧರಿಸಿದ್ದ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿ ಅವುಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ಹಾಕಿ ಯಾರಿಗೂ ಗೊತ್ತಾಗದ ಕಡೆ ಬಿಸಾಡಿ ನಂತರ ಶಿವಾಜಿನಗರಕ್ಕೆ ಆಟೋದಲ್ಲಿ ಹೋಗಿ ಸುತ್ತಾಡಿಕೊಂಡು, ದೋಚಲಾಗಿದ್ದ ಹಣದಿಂದ ಊಟ ಮಾಡಿ ತದ ನಂತರ ನೀಲಸಂದ್ರಕ್ಕೆ ಬಂದು ಹೊಸ ಬಟ್ಟೆ ಮತ್ತು ಶೂ ಖರೀದಿಸಿದ್ದನು. ಸಂಜೆ ಸ್ನೇಹಿತರನ್ನು ಕರೆದುಕೊಂಡು ಮಾರ್ಕೆಟ್‍ಗೆ ಬಂದು ಮದ್ಯಪಾನ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ, ಎಸಿಪಿ ಎ.ವಿ.ಲಕ್ಷ್ಮೀನಾರಾಯಣ ರವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಟಿ.ಚಲುವೇಗೌಡ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin