ಹತ್ತು ರೂಪಾಯಿ ನಾಣ್ಯ ನಡೆಯುತ್ತೆ, ನಡೆಯುತ್ತೆ , ನಡೆಯುತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Ten-Rupees-10-Coin

ಬೆಂಗಳೂರು, ಫೆ.22-ಹತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ. ಎಲ್ಲಾ ಕಡೆ ನಡೆಯುತ್ತವೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವುದು ಬೇಡ. ವರ್ತಕರು ನಾಣ್ಯಗಳನ್ನು ಸ್ವೀಕರಿಸಬೇಕು. ನಾಣ್ಯಗಳ ವಿನಿಮಯಕ್ಕೆ ಅವಕಾಶ ನೀಡಬೇಕು. ನಾಣ್ಯ ಚಲಾವಣೆ ಬಂದ್ ಆಗಿಲ್ಲ ….ಆಗಿಲ್ಲ…  ಖುದ್ದು ಆರ್‍ಬಿಐ ಇದನ್ನು ಸ್ಪಷ್ಟಪಡಿಸಿದೆ. 10 ರೂ.ಗಳ ಯಾವುದೇ ನಾಣ್ಯ ನಕಲಿಯಾಗಿಲ್ಲ. ಹೊಟೇಲ್, ಪೆಟ್ರೋಲ್‍ಬಂಕ್, ತರಕಾರಿ ಅಂಗಡಿ, ದಿನಸಿ ಅಂಗಡಿ ಸೇರಿದಂತೆ ಎಲ್ಲೆಡೆ ನಾಣ್ಯಗಳ ಚಲಾವಣೆ ಎಂದಿನಂತೆ ನಡೆಯಬೇಕು.

ವರ್ತಕರು ಸಾರ್ವಜನಿಕರು ಸ್ವೀಕರಿಸಬೇಕು. ಸಾರ್ವಜನಿಕರೂ ಕೂಡ ಸಹಕರಿಸಬೇಕು. ಯಾವುದೇ ಆತಂಕಕ್ಕೆ ಒಳಗಾಗಬಾರದು ನಕಲಿ ನಾಣ್ಯಗಳು ಬಂದಿಲ್ಲ. ಏಕೆಂದರೆ 10 ರೂ.ಗಳ ಒಂದು ನಕಲಿ ನಾಣ್ಯ ಮಾಡಲು 16 ರೂ. ಖರ್ಚಾಗಲಿದೆ. ಇಷ್ಟೊಂದು ಹಣ ಖರ್ಚು ಮಾಡಿ ಯಾರೂ ಇದನ್ನು ನಕಲಿ ಮಾಡುವುದಿಲ್ಲ. ಗಾಳಿ ಸುದ್ದಿಗೆ ಕಿವಿಗೊಡಬೇಡಿ. ನಾಣ್ಯಗಳು ಎಂದಿನಂತೆ ಚಲಾವಣೆಯಲ್ಲಿವೆ.   ಫೇಸ್‍ಬುಕ್, ವಾಟ್ಸಪ್‍ಗಳಲ್ಲಿ ಹರಿದಾಡುತ್ತಿರುವ ಸುದ್ದಿಯಂತೆ ರಾಷ್ಟ್ರಮುದ್ರೆ 10 ರೂ.ಅಂಕಿ ಇದ್ಯಾವುದೂ ಪ್ರಮುಖವಾಗಿಲ್ಲ. ಕಾಲಕ್ಕೆ ತಕ್ಕಂತೆ ಆರ್‍ಬಿಐ ಹೊಸ ಹೊಸ ನಾಣ್ಯಗಳನ್ನು ತಯಾರಿಸಿದ್ದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆಯೇ ಹೊರತು ಯಾವುದೇ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ಇಲ್ಲ. ಹಾಗಾಗಿ ಎಲ್ಲ ವ್ಯಾಪಾರಿಗಳು ಹಣವನ್ನು ತೆಗೆದುಕೊಳ್ಳಬಹುದು.

ಸಾರ್ವಜನಿಕರೂ ಕೂಡ ನಿರ್ಭಯವಾಗಿ ಕೂಡಿಟ್ಟುಕೊಳ್ಳಬಹುದು. ನಿಮ್ಮಲ್ಲಿರುವ 10 ರೂ.ಗಳ ನಾಣ್ಯ ಸಂಗ್ರಹಕ್ಕೆ ಯಾವುದೇ ಭೀತಿ ಇಲ್ಲ. ಚಲಾವಣೆ ಮಾಡಲೂ ಕೂಡ ಆತಂಕವಿಲ್ಲ. ಆ ರೀತಿ ಆತಂಕವಿದ್ದರೆ ನೀವು ಬ್ಯಾಂಕ್‍ಗೇ ಹೋಗಿ ಕೊಡಬಹುದು. ಯಾರು ನಿಮ್ಮ ನಾಣ್ಯವನ್ನು ತೆಗೆದುಕೊಳ್ಳುವುದಿಲ್ಲವೋ ಅವರ ವಿರುದ್ಧ ದೂರನ್ನು ದಾಖಲಿಸಬಹುದು.   ಏನಪ್ಪಾ ಈ ಹತ್ತು ರೂ.ಗೆ ನಮಗೇಕೆ ಉಸಾಬರಿ ಎಂದು ಉದಾಸೀನ ಮಾಡಬೇಡಿ. ನಾವು ಮಾಡುವ ಒಂದೊಂದು ಸಣ್ಣ ಕೆಲಸಗಳು ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತವೆ. ಯಾರೋ ಗಾಳಿ ಸುದ್ದಿ ತೇಲಿಬಿಟ್ಟಿದ್ದರಿಂದ ಪೆಟ್ರೋಲ್ ಬಂಕ್‍ಗಳಲ್ಲಿ, ಹೊಟೇಲ್‍ಗಳಲ್ಲಿ ಅಂಗಡಿಗಳಲ್ಲಿ ಬಸ್‍ಗಳಲ್ಲಿ 10 ರೂ. ನಾಣ್ಯವನ್ನೇ ತೆಗೆದುಕೊಳ್ಳುತ್ತಿಲ್ಲ.

ಸಾಮಾನ್ಯವಾಗಿ 10 ರೂ. ನಾಣ್ಯವನ್ನು ಪೂಜೆಗೋ, ಹವ್ಯಾಸಕ್ಕೋ ಸಂಗ್ರಹಿಸಿಟ್ಟುಕೊಳ್ಳುವುದು ವಾಡಿಕೆ. ಅದೇ ರೀತಿ ಸಂಗ್ರಹಿಸಿಟ್ಟುಕೊಂಡವರು ಈ ಸುದ್ದಿ ಹರಡುತ್ತಿದ್ದಂತೆ ಒಂದೇ ಸಾರಿ ಮಾರುಕಟ್ಟೆ ಬಿಟ್ಟಿದ್ದರಿಂದ ಇಂತಹ ಸಮಸ್ಯೆ ಉಂಟಾಗಿದೆಯೇ ಹೊರತು ನಾಣ್ಯ ಬಂದ್ ಆಗಿಲ್ಲ.  500 ಮತ್ತು 1000 ಮುಖಬೆಲೆಯ ಹಳೆ ನೋಟು ಹೊರತುಪಡಿಸಿದರೆ ಆರ್‍ಬಿಐ ಯಾವುದೇ ನಾಣ್ಯವನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿಲ್ಲ. ಹಾಗೆಂದು ಆರ್‍ಬಿಐ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಎಲ್ಲರೂ ನಿರ್ಭಯವಾಗಿ ಹತ್ತು ರೂ. ನಾಣ್ಯವನ್ನು ಚಲಾಯಿಸಬಹುದಾಗಿದೆ. ಕೊಡು-ಕೊಳ್ಳುವವರು ಇದನ್ನು ಬಳಸಬಹುದಾಗಿದೆ ಎಂಬುದು ಬ್ಯಾಂಕ್‍ಗಳ ಮನವಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin