ಹನಿನೀರಾವರಿ ಯೋಜನೆಯಿಂದ 60ಸಾವಿರ ಎಕರೆಗೆ ಹನಿ ನೀರಾವರಿ ಸೌಲಭ್ಯ : ಕಾಶಪ್ಪನವರ್

ಈ ಸುದ್ದಿಯನ್ನು ಶೇರ್ ಮಾಡಿ

Vijayananad-a-1

ಹುನಗುಂದ, ಜ.28- ಏಷ್ಯಾದ ಅತಿ ದೊಡ್ಡ ಸಮುದಾಯ ಆಧಾರಿತ ಹನಿ ನೀರಾವರಿ ಯೋಜನೆಯಿಂದ 60 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ತಿಳಿಸಿದರು. ತಾಲೂಕಿನ ರಾಮಥಾಳ ಸೂಕ್ಷ್ಮ ನೀರಾವರಿ ಯೋಜನೆ ಸಮರ್ಪಣೆ ಪೂರ್ವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಹನಿ ನೀರಾವರಿಗಾಗಿ 3.2 ಟಿಎಂಸಿ ಅಡಿ ನೀರನ್ನು ಬಳಸಲಾಗಿದೆ. 14.5 ಸಾವಿರ ರೈತರಿಗೆ ಈ ಯೋಜನೆಯಿಂದ ನೀರಾವರಿ ಸೌಲಭ್ಯ ಒದಗಲಿದ್ದು, ಜೋಳ, ಹತ್ತಿ, ಕಡಲೆ, ತರಕಾರಿ ಸೇರಿದಂತೆ 23 ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಐದು ವರ್ಷಗಳ ಕಾಲ ಖಾಸಗಿ ಕಂಪೆನಿಯವರು ಈ ಹನಿ ನೀರಾವರಿ ಯೋಜನೆಯನ್ನು ನಿರ್ವಹಿಸಲು ಈ ಕುರಿತಂತೆ ತರಬೇತಿ ನೀಡಲಿದ್ದಾರೆ. ಇದಕ್ಕಾಗಿ 14 ಕೋಟಿ ರೂ. ವೆಚ್ಚವಾಗಿದೆ ಎಂದು ವಿವರಿಸಿದರು.ನಂದವಾಡಿ ಏತ ನೀರಾವರಿ ಯೋಜನೆಯಿಂದ ಅನ್ಯಾಯವಾಗಿದೆ ಎಂದ ಅವರು, 28 ಗ್ರಾಮಗಳಿಗೆ 1.5 ಟಿಎಂಸಿ ಅಡಿ ನೀರು ಒದಗಿಸುವಂತೆ ಮನವಿ ಮಾಡಿದರು. ರೈತರಿಗೆ ಇಂಧನ ಇಲಾಖೆಯಿಂದ 220ಕೆವಿ ವಿದ್ಯುತ್ ಕೇಂದ್ರ ಹಾಗೂ ಉಪವಿಭಾಗವನ್ನು ಆರಂಭಿಸಬೇಕು. ಐಹೊಳೆ, ಪಟ್ಟದಕಲ್ಲು, ಬಾದಾಮಿ ಮಾರ್ಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಕೂಡಲ ಸಂಗಮವನ್ನು ಅಕ್ಷರಧಾಮ ಮಾದರಿಯಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಕೂಡಲ ಸಂಗಮ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸಲಿ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕೂಡಲ ಸಂಗಮದ ಸ್ವಾಮೀಜಿ ಶ್ರೀ ಜಯಬಸವರಾಜೇಂದ್ರ ಸ್ವಾಮೀಜಿ, ಶಾಸಕ ರಾಮಕೃಷ್ಣ ಸಿದ್ದಲಿಂಗಪ್ಪ ದೊಡ್ಡಮನಿ, ಸಿದ್ದು ಬಿ.ನ್ಯಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin