‘ಹರಾಮಿ’ ಹೇಳಿಕೆ : ಗೋವಾ-ಕರ್ನಾಟಕ ಬಸ್ ಸಂಚಾರ ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Goa--01

ಬೆಂಗಳೂರು, ಜ.15-ಗೋವಾ ನೀರಾವರಿ ಸಚಿವ ಕನ್ನಡಿಗರ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬೆಚ್ಚಿ ಬಿದ್ದಿರುವ ಗೋವಾ ಸರ್ಕಾರ ಇಂದು ಬೆಳಗಾವಿಗೆ ಆಗಮಿಸಬೇಕಾಗಿದ್ದ ಬಸ್‍ಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ನಿನ್ನೆ ಬೆಳಗಾವಿಯ ಕಣಕುಂಬಿಯಲ್ಲಿ ಮಹದಾಯಿ ಯೋಜನೆ ಕಾಮಗಾರಿ ಪರಿಶೀಲನೆಗೆಂದು ಆಗಮಿಸಿದ್ದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಕನ್ನಡಿಗರು ಹರಾಮಿಗಳು. ಅವರು ಏನು ಬೇಕಾದರೂ ಮಾಡುತ್ತಾರೆ. ಮಹದಾಯಿ ವಿವಾದವನ್ನು ನ್ಯಾಯಾಧೀಕರಣದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಈ ಸಂಬಂಧ ದಾಖಲೆಗಳನ್ನು ನ್ಯಾಯಾಧೀಕರಣಕ್ಕೆ ಸಲ್ಲಿಸುತ್ತೇವೆ ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದರು.

ಗೋವಾ ಸಚಿವರ ಈ ಹೇಳಿಕೆಯಿಂದ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪಕ್ಷಾತೀತವಾಗಿ ರಾಜಕಾರಣಿಗಳು, ಕನ್ನಡಪರ ಸಂಘಟನೆಗಳು ಪಾಳ್ಯೇಕರ್ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದರು. ಕನಿಷ್ಠ ಕುಡಿಯುವ ನೀರಿಗೆ ಆಗ್ರಹಿಸಿ ರಾಜ್ಯದಲ್ಲಿ ಕಳೆದ 900 ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ಮಾನವೀಯತೆ ಮರೆತಿರುವ ಗೋವಾ ಸರ್ಕಾರ ಮನಬಂದಂತೆ ವರ್ತಿಸುತ್ತಿದೆ. ನ್ಯಾಯಾಧೀಕರಣ ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದರೂ ಮನಸ್ಸು ಮಾಡದೆ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗೋವಾ ಜಲ ಸಂಪನ್ಮೂಲ ಸಚಿವ ರಾಜ್ಯಕ್ಕೆ ಭೇಟಿ ನೀಡಿ ಕನ್ನಡಿಗರ ಸ್ವಾಭಿಮಾನ ಕೆರಳಿಸುವಂತಹ ಹೇಳಿಕೆ ನೀಡಿದ್ದಾರೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇವರ ಹೇಳಿಕೆಯನ್ನು ಬಿಜೆಪಿ ಪಕ್ಷದವರೇ ಖಂಡಿಸಿದ್ದರು. ಇಂದು ಪಾಳ್ಯೇಕರ್ ಆ ಹೇಳಿಕೆ ವಾಪಸ್ ಪಡೆದಿದ್ದರಾದರೂ ಸಂಭಾವ್ಯ ಗಲಾಟೆ ಹಿನ್ನೆಲೆಯಲ್ಲಿ ಗೋವಾದಿಂದ ರಾಜ್ಯಕ್ಕೆ ಬರುವ ಬಸ್‍ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.  ಪ್ರತಿಭಟನಾಕಾರರ ಆಕ್ರೋಶಗೊಂಡವರಿಗೆ ಮೊದಲು ತುತ್ತಾಗುವುದೇ ಸರ್ಕಾರಿ ಬಸ್‍ಗಳು. ಹಾಗಾಗಿ ಬಸ್‍ಗಳ ಓಡಾಟವನ್ನು ನಿಲ್ಲಿಸಿರುವುದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಗೋವಾದಲ್ಲಿ ಸಾಕಷ್ಟು ಕನ್ನಡಿಗರಿದ್ದಾರೆ. ಬೆಳಗಾವಿ ಮತ್ತು ಗೋವಾ ಗಡಿ ಭಾಗದಲ್ಲಿ ಸಾಕಷ್ಟು ಪ್ರಯಾಣಿಕರ ಓಡಾಟವಿರುತ್ತದೆ. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಇದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

Facebook Comments

Sri Raghav

Admin