ಹಲ್ಲೆಗೊಳಗಾಗಿದ್ದ ಬಶೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Basheet--01

ಮಂಗಳೂರು. ಜ.07: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಶೀರ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.   ಸುರತ್ಕಲ್ ನ ಕಾಟಿಪಳ್ಳ ಎಂಬಲ್ಲಿ ಜನವರಿ 3ರಂದು ಮಧ್ಯಾಹ್ನ ಸುಮಾರು 1.30ಕ್ಕೆ ದುಷ್ಕರ್ಮಿಗಳ ತಂಡವೊಂದು ದೀಪಕ್ ರಾವ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಪರಿಣಾಮ ಗಂಭೀರ ಗಾಯಗೊಂಡ ದೀಪಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಂದೇ ರಾತ್ರಿ ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಬಶೀರ್ ಮೇಲೆ 7 ಜನರ ತಂಡವೊಂದು ತಲ್ವಾರ್ ದಾಳಿ ನಡೆಸಿತ್ತು. ಪರಿಣಾಮ ಗಂಟಲು, ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಬಶೀರ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ನಡುವೆ ಜನವರಿ 3 ರಂದು ಹಲ್ಲೆಗೊಳಗಾಗಿದ್ದ ಬಶೀರ್ ಎನ್ನುವವರ ಮೇಲೆ ನಗರದ ಎಜೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8.10 ಕ್ಕೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಬಶೀರ್ ಆರೋಗ್ಯ ವಿಚಾರಿಸಲು ಶನಿವಾರ ಸಚಿವ ಯುಟಿ ಖಾದರ್ ಭೇಟಿ ನೀಡಿ ಆಸ್ಪತ್ರೆಯ ವೆಚ್ಚ ಭರಿಸುವ ಭರವಸೆ ನಿಡಿದ್ದರು. ಅಲ್ಲದೇ ಬಶೀರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬಶೀರ್ ಕೊನೆಯುಸಿರೆಳೆದಿದ್ದಾರೆ.

ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿತ್ತು ಎನ್ನಲಾಗಿತ್ತು. ಅಮಾಯಕರಾಗಿದ್ದ ಬಶೀರ್ ಅವರ ಪರಿಚಯವೇ ಇಲ್ಲದ ದುಷ್ಕರ್ಮಿಗಳು ಕೇವಲ ಪ್ರತೀಕಾರದ ಕಾರಣಕ್ಕೆ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದರು. ಘಟನೆಯ ಹಿನ್ನೆಲೆಯಲ್ಲಿ ಮಂಗಳೂರಿನಾದ್ಯಂತ ಬಿಗು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin