ಹಳದಿ ಬಣ್ಣದ ವೈರಾಣು ರೋಗ ಆತಂಕದಲ್ಲಿ ಹೆಸರು ಬೆಳೆಗಾರರು

ಈ ಸುದ್ದಿಯನ್ನು ಶೇರ್ ಮಾಡಿ

ತುರುವೇಕೆರೆ, ಜೂ. 18- ತಾಲ್ಲೂಕಿನ ಹಲವೆಡೆಗಳಲ್ಲಿನ ಹೆಸರು ಗಿಡಕ್ಕೆ ಹಳದಿ ಬಣ್ಣದ ನಂಜು ರೋಗ ಕಾಣಿಸಿಕೊಂಡು ರೈತರಲ್ಲಿ ಆತಂಕ ಉಂಟು ಮಾಡಿದೆ.ಈ ಬಾರಿ ಪೂರ್ವ ಮುಂಗಾರು ಮಳೆ ಎಲ್ಲ ಕಡೆ ಸಮನಾಗಿ ಹಂಚಿಕೆಯಾಗದೆ ಆಯ್ದ ಪ್ರದೇಶಗಳಲ್ಲಿಉತ್ತಮ ಮಳೆ ಆಗಿದ್ದು ಭೂಮಿ ಹದ ಮಾಡಿಕೊಂಡಿದ್ದ ರೈತರು ಹೆಸರು ಬೀಜ ಬಿತ್ತನೆ ಮಾಡಿದರು.

ಸಕಾಲಕ್ಕೆ ಒಳ್ಳೆ ಮಳೆಯಾದ್ದರಿಂದ ಅಲ್ಲಲ್ಲಿ ಹೆಸರು ಸಮೃದ್ಧವಾಗಿ ಬೆಳೆದು ಹೂವು, ಕಾಯಿ ಕಟ್ಟಿ ಒಳ್ಳೆಯ ಫಸಲು ರೈತರ ಕೈ ಸೇರುವ ನಿರೀಕ್ಷೆಯಲ್ಲಿತ್ತು.ಆದರೆ ಕೆಲವೆಡೆ ಹೆಸರು ಗಿಡಕ್ಕೆ ಹಳದಿ ಬಣ್ಣದ ವೈರಸ್ ರೋಗ ತಗುಲಿ ಎಲೆಗಳೆಲ್ಲೇ ಹಳದಿ ಬಣ್ಣಕ್ಕೆ ತಿರುಗಿವೆ.

ಆರಂಭದಲ್ಲಿ ಒಂದೆರಡು ಗಿಡಕ್ಕೆ ಈ ರೋಗ ಕಾಣಿಸಿಕೊಂಡಿತು. ದಿನಕಳೆದಂತೆ ಹೊಲದ ಇಡೀ ಹೆಸರು ಗಿಡಕ್ಕೆ ಆವರಿಸಿ ಗಿಡವೆಲ್ಲ ಮುರುಟಾಗಿಬಿಟ್ಟಿದೆ ತಾಲ್ಲೂಕಿನ ಕೊಂಡಜ್ಜಿ, ಗೊಪ್ಪೇನಹಳ್ಳಿ,ಬಾಣಸಂದ್ರ, ದುಂಡಾ, ಕುರುಬರಹಳ್ಳಿ ಬ್ಯಾಲ, ತಾಳಕೆರೆ, ಕಲ್ಕೆರೆ, ಎ.ಹೊಸಹಳ್ಳಿ, ಹುಲ್ಲೇಕೆರೆ, ಸಾರಿಗೇಹಳ್ಳಿ, ಮಾಯಸಂದ್ರ, ದಂಡಿನಶಿವರ ಮತ್ತು ದಬ್ಬೇಘಟ್ಟಹೋಬಳಿಯ ಕೆಲವು ಭಾಗದಲ್ಲಿ ಹಳದಿ ಬಣ್ಣದ ರೋಗ ಕಂಡು ಬಂದಿದೆ.

ಹಳದಿ ರೋಗ ಹೇಗೆ ಹರಡುತ್ತದೆ:
ಹೆಸರು ಗಿಡ ಹೂವು, ಈಚು ಕಟ್ಟುವ ಹಂತದಲ್ಲಿ ಶೀತದ ಹವಾಮಾನ ಈ ಬಾರಿ ಬೇಗನೆ ಆರಂಭವಾಯಿತು. ಟ್ರಿಪ್ಸ್, ಎಪಿಡ್ ಮತ್ತು ಮೈಟ್ಸ್ ಎಂಬ ಸೂಕ್ಷ್ಮ ಕೀಟಾಣುಗಳು ಹೆಸರು ತಾಕಿನ ಎಲೆಯ ತಳಭಾಗದಲ್ಲಿ ಸೇರಿಕೊಂಡು ಪತ್ರಹರಿತಿನ ರಸವನ್ನು ಕೆರೆದು ಹೀರುತ್ತಾ ಹೋದಂತೆ ಗಿಡವೆಲ್ಲ ಹಳದಿ ಬಣ್ಣವಾಗಿ ಮಾರ್ಪಾಡಾಗಿದೆ. ಪೋಷಕಾಂಶವಿಲ್ಲದೆ ಹೆಸರು ತಾಕು ಮುರುಟಿಕೊಂಡಿದೆ. ರೋಗ ಬಾಧಿತ ಗಿಡ ಹಳದಿ ಬಣ್ಣದ ಹೆಸರು ಚೊಟ್ಟು ಬಿಟ್ಟಿದೆ. ಕಾಳುಗಳನ್ನು ಸರಿಯಾಗಿ ಕಟ್ಟದೆ ಸಣ್ಣಗಾಗಿ ಶೇಕಡಾ ಅರ್ಧದಷ್ಟು ಇಳುವರಿ ಕಡಿಮೆಯಾಗುವ ಸಾಧತೆಯಿದ್ದು ರೈತರು ಆತಂಕಕ್ಕೆ ಒಳಗಾಗುವರು ಎನ್ನುತ್ತಾರೆ ಪರ್ಟಿಲೈಸರ್ ಅಂಗಡಿ ಮಾಲೀಕ ಡಿ.ಎಸ್.ಕೈಲಾಶ್.

ನಿಯಂತ್ರಣ ಹೇಗೆ: ಆರಂಭದಲ್ಲಿ ಹಳದಿ ನಂಜು ರೋಗ ಕಾಣಿಸಿಕೊಂಡ ತಕ್ಷಣ ರೋಗ ಬಾಧಿ ಗಿಡಗಳನ್ನುತಕ್ಷಣ ಬುಡಸಮೇತ ಕಿತ್ತು ನಾಶಮಾಡಿಸಬೇಕು. ಹಾಗು 1ಲೀಟರ್ ನೀರಿಗೆ ಇಮಿಡಾಕ್ಲೊಪ್ರಿಡ್ 1.7ಎಂ.ಎಲ್ ಅಥವಾ ಥಯೋಮೆಥಾಕ್ಸಾಮ್ ಅರ್ಧ ಎಂ.ಎಲ್ ದ್ರಾವಣ ಸಿಂಪಡಿಸಬೇಕು. ಆಗ ತಕ್ಕಮಟ್ಟಿಗೆ ರೋಗ ತಹಬದಿಗೆ ಬರಲಿದೆಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ಆರ್.ಪ್ರಮೋದ್‍ಕುಮಾರ್ ತಿಳಿಸಿದರು.

ಈ ಬಾರಿ ಮಳೆಯೂ ಸರಿಯಾಗಿ ಬರಲಿಲ್ಲ. ಸಾವಿರಾರು ರೂಪಾಯಿಗಳು ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದೆವು. ಈಗ ಅದೆಂತಹುದೋ ಹಳದಿ ಬಣ್ಣದ ರೋಗ ಬಂದು ಸರಿಯಾಗಿ ಕಾಳು ಕಟ್ಟಿಲ್ಲ. ಮನೆಯ ಖರ್ಚಿಗೂ ಕಾಳು ಸಿಗೊಲ್ಲ ಹೀಗಾದರೆ ರೈತರ ಗತಿಯೇನು? ಎಂದು ಹುಲ್ಲೇಕೆರೆ ಗ್ರಾಮದ ರೈತ ಗಂಗಣ್ಣ ಅಳಲು ತೋಡಿಕೊಂಡಿದ್ದಾರೆ.

Facebook Comments