ಹಳೆ ಕರೆನ್ಸಿ ಪರಿವರ್ತನೆಗೆ ಹೊಸ ತಂತ್ರ : ಕೋರಿಯರ್ ಮೂಲಕ ವಿದೇಶಕ್ಕೆ ನೋಟು ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

Notes-01

ನವದೆಹಲಿ, ಏ.9-ರದ್ದಾಗಿರುವ 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ಅತಿ ಚಾಣಾಕ್ಷತನದಿಂದ ಪರಿವರ್ತನೆ ಮಾಡುವ ವ್ಯವಸ್ಥಿತ ಜಾಲವೊಂದನ್ನು ಕಸ್ಟಮ್ಸ್ (ಸೀಮಾ ಸುಂಕ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನಿಷೇಧಕ್ಕೆ ಒಳಗಾಗಿರುವ ಕರೆನ್ಸಿಗಳನ್ನು ಕೊರಿಯರ್ ಮೂಲಕ ವಿದೇಶಗಳಿಗೆ ರವಾನಿಸಿ ಸರ್ಕಾರ ನಿಯಮವನ್ನೇ ಬಳಸಿಕೊಂಡು ಆನಂತರ ಅದನ್ನು ಹೊಸ ನೋಟುಗಳಾಗಿ ಬದಲಾವಣೆ ಮಾಡುವುದು ಈ ಜಾಲದ ಉದ್ದೇಶವಾಗಿತ್ತು.
ಕಳೆದ ವರ್ಷ ನವೆಂಬರ್‍ನಲ್ಲಿ ಗರಿಷ್ಠ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹೊರಗಿರಿಸಿದ ಬಳಿಕ ಅನಿವಾಸಿ ಭಾರತೀಯರಿಗೆ (ಎನ್‍ಆರ್‍ಐಗಳು) ಹಳೆ ಕರೆನ್ಸಿಗಳನ್ನು ಬದಲಾವಣೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಜೂನ್ 30ವರೆಗೆ ಕಾಲಾವಕಾಶ ನೀಡಿದೆ. ಸರ್ಕಾರದ ಈ ಅವಕಾಶವನ್ನೇ ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತಿದ್ದ ಸಮಯಸಾಧಕ ಕಿಲಾಡಿಗಳ ಕುತಂತ್ರ ಈಗ ಬಟಾಬಯಲಾಗಿದೆ.

ಈ ಸಂಬಂಧ ಕೆಲವರ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮಾನ್ಯಗೊಂಡ ನೋಟುಗಳನ್ನು ಕೊರಿಯರ್ ಮೂಲಕ ಅಲ್ಲಿ ನೆಲೆಸಿರುವ ಎನ್‍ಆರ್‍ಐಗಳಿಗೆ ರವಾನಿಸಿ, ಜೂನ್ 30ರ ಗಡುವಿನ ಒಳಗೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಈ ಸಂಬಂಧ ಲಕ್ಷಾಂತರ ರೂ.ಗಳ ಹಳೇ ಕರೆನ್ಸಿಗಳನ್ನು ಜಫ್ತಿ ಮಾಡಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಪುಸ್ತಕಗಳು, ದಾಖಲೆಪತ್ರಗಳು ಅಥವಾ ಇನ್ನಿತರ ವಸ್ತುಗಳ ಹೆಸರಿನಲ್ಲಿ ಹಳೆ ನೋಟುಗಳನ್ನು ರವಾನಿಸಲು ಯತ್ನಿಸಿರುವ ಅನೇಕ ಪ್ರಕರಣಗಳೂ ಸಹ ಪತ್ತೆಯಾಗಿವೆ. ಪಂಜಾಬ್‍ನಿಂದ ಆಸ್ಟ್ರೇಲಿಯಾಗೆ ಬುಕ್ ಆಗಿದ್ದ ಎರಡು ಪ್ರಕರಣಗಳೂ ಸೇರಿದಂತೆ ಕೆಲವು ಕೇಸ್‍ಗಳು ಬೆಳಕಿಗೆ ಬಂದಿವೆ.

ದಕ್ಷಿಣ ಕೊರಿಯಾ ಮತ್ತು ಅಮೆರಿಕಕ್ಕೆ ಹೋಗುತ್ತಿದ್ದ ಕೋರಿಯರ್‍ಗಳನ್ನು ಅನುಮಾನದ ಮೇಲೆ ತಪಾಸಣೆ ಮಾಡಿದಾಗ ಅವುಗಳಲ್ಲಿ ರದ್ದಾಗಿರುವ ಹಳೇ ನೋಟುಗಳು ಇದ್ದವು.  ಹೊರ ರಾಷ್ಟ್ರಗಳಲ್ಲಿರುವ ತಮ್ಮ ಬಂಧು-ಮಿತ್ರರ ನೆರವು ಪಡೆದು ತಮ್ಮಲ್ಲಿ ಉಳಿದಿರುವ ಹಳೆ ನೋಟುಗಳನ್ನು ಹೊಸ ಕರೆನ್ಸಿಯಾಗಿ ಪರಿವರ್ತಿಸುವುದು ಇದರ ಹಿಂದಿನ ಕುಯುಕ್ತಿಯಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.  ರಾಜಧಾನಿ ನವದೆಹಲಿ ಸೇರಿದಂತೆ ವಿವಿಧೆಡೆ ವಿದೇಶಿ ಅಂಚೆ ಕಚೇರಿಗಳಿಗೆ ಬಂದಿರುವ ಮತ್ತು ಬರುತ್ತಿರುವ ಪಾರ್ಸೆಲ್‍ಗಳ ಮೇಲೆ ಸೀಮಾಸುಂಕ ಅಧಿಕಾರಿಗಳು ಹದ್ದಿನಕಣ್ಣಿನ ನಿಗಾ ಇಟ್ಟಿದ್ದಾರೆ.

[ ಇದನ್ನೂ ಓದಿ :  ನಂಜನಗೂಡು-ಗುಂಡ್ಲುಪೇಟೆ ಮಿನಿ ಫೈಟ್ (Live Updates) ]

Facebook Comments

Sri Raghav

Admin