ಹಳೆ ನೋಟುಗಳಲ್ಲೇ ತೆರಿಗೆ ಪಾವತಿಸಲು ಬಿಬಿಎಂಪಿ ಆಫರ್

ಈ ಸುದ್ದಿಯನ್ನು ಶೇರ್ ಮಾಡಿ

BBMP-02

ಬೆಂಗಳೂರು, ನ.12- ಹಳೆಯ 500, 1000ರೂ. ಮುಖಬೆಲೆಯ ನೋಟುಗಳನ್ನು ಮುಂದಿನ ಮೂರು ದಿನಗಳವರೆಗೆ ಸ್ವೀಕರಿಸಲು ಕೇಂದ್ರ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಿದ್ಯುತ್‍ಬಿಲ್, ನೀರಿನ ಬಿಲ್ ಮಾದರಿಯಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ತೀರ್ಮಾನಿಸಿದೆ. ಇಂದಿನಿಂದಲೇ ನಗರದ ನಿವಾಸಿಗಳು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಹಳೆಯ ನೋಟುಗಳ ನಗದಿನಲ್ಲೇ ಪಾವತಿಸಬಹುದಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಮೂರು ದಿನಗಳ ಒಳಗೆ 500, 1000 ರೂ.ಮುಖಬೆಲೆಯ ನೋಟುಗಳ ಸ್ವೀಕಾರಕ್ಕೆ ಅವಕಾಶ ವಿಸ್ತರಿಸುತ್ತಿದ್ದಂತೆ ನಿನ್ನೆ ಆಯುಕ್ತರನ್ನು ಭೇಟಿ ಮಾಡಿದ ಗುಣಶೇಖರ್ ಆವರು, ವಿದ್ಯುತ್, ನೀರಿನ ಬಿಲ್ ಮಾದರಿಯಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸಿಕೊಳ್ಳುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು.

ಅದರಂತೆ ಈ ತಕ್ಷಣದಿಂದಲೇ ಸಾರ್ವಜನಿಕರು ಎಆರ್‍ಒ, ವಲಯ, ಕೇಂದ್ರ ಕಚೇರಿಗಳಿಗೆ ತೆರಳಿ ಆಸ್ತಿ ತೆರಿಗೆ ಪಾವತಿಸಿ ರಶೀದಿ ಪಡೆಯಬಹುದಾಗಿದೆ. ಈ ಹಿಂದೆ ಎಆರ್‍ಒ ಕಚೇರಿಯಲ್ಲಿ ಚಲನ್ ಪಡೆದು ಬ್ಯಾಂಕ್‍ಗೆ ಕಟ್ಟಿ ನಂತರ ರಶೀದಿ ಪಡೆಯಬೇಕಾಗಿತ್ತು. ಈಗ ಅದನ್ನು ಸರಳೀಕರಣಗೊಳಿಸಿ ನೇರವಾಗಿ ಹಣ ಪಡೆದು ರಶೀದಿ ನೀಡಲು ಬಿಬಿಎಂಪಿ ಮುಂದಾಗಿದೆ.
ನಗರದ ನಿವಾಸಿಗಳು ತಮ್ಮ ಆಸ್ತಿ ತೆರಿಗೆ ಬಾಕಿ ಇದ್ದರೆ ಕೂಡಲೇ ಎಲ್ಲಾ ಎಆರ್‍ಒ ಕಚೇರಿಗೆ ತೆರಳಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿ ತೆರಿಗೆ ಕಟ್ಟಬಹುದಾಗಿದೆ. ನ.14ರವರೆಗೆ ಈ ಅವಕಾಶವನ್ನು ಬಿಬಿಎಂಪಿ ಕಲ್ಪಿಸಿದೆ. ತಮ್ಮಲ್ಲಿರುವ ಹಳೆಯ ನೋಟುಗಳು ಚಲಾವಣೆ ಕಳೆದುಕೊಳ್ಳುತ್ತವೆ. ಹೀಗಾಗಿ ಆಸ್ತಿ ತೆರಿಗೆ ಪಾವತಿಸುವ ಮೂಲಕ ಅವುಗಳಿಗೆ ಮೌಲ್ಯ ಕಲ್ಪಿಸಿಕೊಳ್ಳಬಹುದಾಗಿದೆ. ಅದಕ್ಕೆ ಮೂರು ದಿನಗಳ ಅವಕಾಶವಿದೆ.

ಮುಂಗಡವಾಗಿಯೂ ಕೂಡ ಆಸ್ತಿ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ. ತಡ ಮಾಡದೆ ಜನ ಪಾಲಿಕೆಯ ಕಚೇರಿಗಳಿಗೆ ತೆರಳಿ ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಬಹುದು.
ಹಣ ಇಟ್ಟುಕೊಂಡು ಏನು ಮಾಡಬಹುದು ಎಂದು ಕಂಗಾಲಾಗಿರುವವರಿಗೆ ಇದೊಂದು ಸುಗಮ ಅವಕಾಶವನ್ನು ಬಿಬಿಎಂಪಿ ಕಲ್ಪಿಸಿದೆ. ಪ್ರಸಕ್ತ ಸಾಲಿನಲ್ಲಿ 2400 ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. 800ಕೋಟಿ ರೂ. ತೆರಿಗೆ ಬಾಕಿ ಇತ್ತು. ಇಂದಿನಿಂದ ಮೂರು ದಿನಗಳ ಕಾಲ ಅವಕಾಶ ಇರುವುದರಿಂದ ಇಷ್ಟು ಪ್ರಮಾಣದ ತೆರಿಗೆ ಪಾವತಿಯಾಗುವ ಸಾಧ್ಯತೆ ಇದೆ.  ಮುಂಗಡವಾಗಿಯೂ ಜನರ ತೆರಿಗೆ ಪಾವತಿಸುವ ಸಾಧ್ಯತೆ ಇದೆ. ತೆರಿಗೆ ಪಾವತಿಸಲು ಜನ ಮುಗಿ ಬೀಳುವ ಸಾಧ್ಯತೆ ಇರುವುದರಿಂದ ಬಿಬಿಎಂಪಿಯಲ್ಲಿ ಹೆಚ್ಚಿನ ಕೌಂಟರ್ ತೆಗೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin