ಹಳೇನೋಟು ದಂಧೆ, ಸಿಸಿಬಿ ಬಲೆಗೆ ಬಿದ್ದ ರಿಯಲ್‍ಎಸ್ಟೇಟ್ ಏಜೆಂಟ್‍ಗಳು, 1.28 ಕೋಟಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

CCb-2

ಬೆಂಗಳೂರು, ಮಾ.23 – ಅಮಾನ್ಯಗೊಂಡಿರುವ 500 ಹಾಗೂ 1000 ರೂ. ಮುಖಬೆಲೆಯ ಹಳೆ ನೋಟುಗಳನ್ನು ಹೊಸ ಕರೆನ್ಸಿಗೆ ಬದಲಾವಣೆ ಮಾಡಿಕೊಳ್ಳುವ ಯತ್ನದಲ್ಲಿದ್ದಾಗ ಸಿಸಿಬಿ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ ಒಂದು ಕೋಟಿ 28 ಲಕ್ಷ ರೂ. ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ತಿಳಿಸಿದರು.   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಕೋಣನಕುಂಟೆಯ ಜೆಮ್ಮಿ ರಾಹುಲ್(34) ಮತ್ತು ಉತ್ತರ ಕನ್ನಡದ ಹೊನ್ನಾವರ ನಿವಾಸಿ ಅಜಯ್(26) ಎಂಬುವರನ್ನು ಬಂಧಿಸಲಾಗಿದೆ ಎಂದರು. ಈ ಇಬ್ಬರು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದು, ಅದರಿಂದ ಗಳಿಸಿದ್ದ ಒಂದು ಕೋಟಿ 28 ಲಕ್ಷ ಹಣಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣ ಬ್ಯಾಂಕ್‍ಗೆ ಕಟ್ಟಿ ಹೊಸ ಕರೆನ್ಸಿಗೆ ಬದಲಾಯಿಸಿಕೊಳ್ಳಲು ಸಾಧ್ಯವಾಗದೆ ಬಚ್ಚಿಟ್ಟಿದ್ದರು.

ತದನಂತರ ಶೇಷಾದ್ರಿಪುರಂ ಸರಹದ್ದಿನ ಪೈಪ್‍ಲೈನ್ ರಸ್ತೆಯಲ್ಲಿರುವ ಜುಲ್ತಾ ಸೂರ್ಯ ಎಲೈವ್ ಅಪಾರ್ಟ್‍ಮೆಂಟ್‍ನಲ್ಲಿರುವ ರಿಷಿ ಜೈನ್ ಚಾರ್ಟೆಡ್ ಅಕೌಂಟೆಂಟ್ ಕಚೇರಿಯ ನೆಲ ಮಾಳಿಗೆಯಲ್ಲಿ ಅಮಾನ್ಯಗೊಂಡಿರುವ 500 ಹಾಗೂ 1000 ರೂ. ಮುಖಬೆಲೆಯ ಹಳೆ ನೋಟುಗಳನ್ನು ಹೊಸ ಕರೆನ್ಸಿಗೆ ಬದಲಾಯಿಸಿಕೊಳ್ಳುವ ಯತ್ನದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.   ಈ ವೇಳೆ ಆರೋಪಿಗಳಿಬ್ಬರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು , ಸ್ಥಳದಲ್ಲಿದ್ದ ಮಾರುತಿ ಕಾರು, ಅಮಾನ್ಯಗೊಂಡಿರುವ 500 ಹಾಗೂ 1000 ರೂ. ಮುಖಬೆಲೆಯ 1.28 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ ಎಂದು ಅವರು ವಿವರಿಸಿದರು. ಆರೋಪಿಗಳಿಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರವೀಣ್ ಸೂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin