ಹಾನಗಲ್, ಹುಬ್ಬಳ್ಳಿ ಮತ್ತು ಶಿರಸಿಯಲ್ಲಿ ಎಟಿಎಂ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

ATM-Robbery--01

ಶಿರಸಿ,ಮಾ.6- ಇತ್ತೀಚೆಗೆ ಎಟಿಎಂಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು , ತಡರಾತ್ರಿ ಹಾನಗಲ್ ಹಾಗೂ ಶಿರಸಿಯ ಎಟಿಎಂಗಳಲ್ಲಿ ದರೋಡೆ ನಡೆದಿದ್ದರೆ, ಹುಬ್ಬಳ್ಳಿಯಲ್ಲಿ ದರೋಡೆಗೆ ವಿಫಲಯತ್ನ ನಡೆದಿದೆ.

ಹಾನಗಲ್:

ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಮತ್ತು ಎಸ್‍ಬಿಎಂ ಬ್ಯಾಂಕ್‍ನ ಎಟಿಎಂಗಳ ಬೀಗ ಮುರಿದು ಒಳ್ಳನುಗ್ಗಿರುವ ಕಳ್ಳರು ಗ್ಯಾಸ್ ಕಟರ್‍ನಿಂದ ಎಟಿಎಂ ಯಂತ್ರವನ್ನು ಕತ್ತರಿಸಿ ಹಣ ದೋಚಿ ಪರಾರಿಯಾಗಿದ್ದಾರೆ.   ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದಲ್ಲಿ ಈ ಎರಡು ಎಟಿಎಂಗಳಲ್ಲಿ ಕಳ್ಳರು ಲಕ್ಷಾಂತರ ರೂ. ದೋಚಿರುವ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದ ಹಾನಗಲ್ ಪಿಎಸ್‍ಐ ಮಂಜಣ್ಣ ಹಾಗೂ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು , ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ:

ನಗರದ ಹೃದಯಭಾಗದಲ್ಲಿನ ಎಟಿಎಂಗೆ ನುಗ್ಗಿದ ದರೋಡೆಕೋರರು ಎಟಿಎಂ ಯಂತ್ರವನ್ನು ಜಖಂಗೊಳಿಸಿ 17 ಲಕ್ಷ ರೂ. ದರೋಡೆ ಮಾಡಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.   ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಅಶ್ವಿನಿ ಸರ್ಕಲ್ ಬಳಿಯ ಐಸಿಐಸಿಐ ಶಾಖೆಗೆ ಸೇರಿದ ಎಟಿಎಂನಲ್ಲಿ ಈ ದರೋಡೆ ನಡೆದಿದೆ. ಸುದ್ದಿ ತಿಳಿದ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ದರೋಡೆಗೆ ಯತ್ನ:

ಹಳೆ ಆದಾಯ ತೆರಿಗೆ ಕಚೇರಿ ಬಳಿ ಇರುವ ಕೆನರಾ ಬ್ಯಾಂಕ್‍ನ ಎಟಿಎಂನೊಳಗೆ ನುಗ್ಗಿದ ದರೋಡೆಕೋರರು ದರೋಡೆಗೆ ವಿಫಲ ಯತ್ನ ನಡೆಸಿದ್ದಾರೆ.   ರಾತ್ರಿ ಈ ಎಟಿಎಂನೊಳಗೆ ನುಗ್ಗಿದ ದರೋಡೆಕೋರರು ಒಂದು ಸಿಸಿ ಕ್ಯಾಮೆರಾವನ್ನು ಹಾನಿ ಮಾಡಿ ದರೋಡೆಗೆ ವಿಫಲಯತ್ನ ನಡೆದಾಗ, ಮತ್ತೊಂದು ಸಿಸಿ ಕ್ಯಾಮೆರಾವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin