ಹಾರೋಹಳ್ಳಿದೊಡ್ಡಿ ಗ್ರಾಮದಲ್ಲಿ ಚಿಕೂನ್ಗುನ್ಯ : ಆರೋಗ್ಯಾಧಿಕಾರಿ ಇಂದು ಗ್ರಾಮಕ್ಕೆ ಭೇಟಿ
ಚನ್ನಪಟ್ಟಣ, ಅ.6- ತಾಲ್ಲೂಕಿನ ಹಾರೋಹಳ್ಳಿದೊಡ್ಡಿ ಗ್ರಾಮದಲ್ಲಿ ಚಿಕೂನ್ಗುನ್ಯ ಲಗ್ಗೆಯಿಟ್ಟ ಬಗ್ಗೆ ನಿನ್ನೆ ಪತ್ರಿಕೆಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿ ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಆರೋಗ್ಯಾಧಿಕಾರಿ ನಿನ್ನೆಯೂ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ವಿಚಾರಿದ್ದು, ಇಂದು ಬೆಳಗ್ಗೆಯೂ ಗ್ರಾಮಕ್ಕೆ ಭೇಟಿ ನೀಡಿ ಪ್ರತಿ ಮನೆ ಮನೆಗೆ ತೆರಳಿ ಚಿಕೂನ್ಗುನ್ಯ ಪೀಡಿತರ ಆರೋಗ್ಯ ವಿಚಾರಿಸಿದ್ದಾರೆ.ಅಲ್ಲದೆ ಗ್ರಾಮಸ್ಥರಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡುವ ಬಗ್ಗೆ ಇದೇ ವೇಳೆ ಅರಿವು ಮೂಡಿಸಿದ್ದಾರೆ. ಸದ್ಯ ಈಗಲಾದರೂ ಆರೋಗ್ಯ ಇಲಾಖೆಗೆ ಬಡವರ ಬಗ್ಗೆ ಕನಿಕರ ಬಂತಲ್ಲಾ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರು ಪಟ್ಟಪಾಡು ಅಷ್ಟಿಷ್ಟಲ್ಲ. ಅವರು ಚಿಕಿತ್ಸೆಗೆಂದು ಖರ್ಚು ಮಾಡಿರುವ ಹಣ ಲೆಕ್ಕಕ್ಕಿಲ್ಲದ್ದಾಗಿದೆ. ಇನ್ನಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರಣಾಂತಿಕ ಕಾಯಿಲೆಗಳಾದ ಚಿಕೂನ್ಗುನ್ಯಾ, ಡೆಂಗ್ಯೂ, ಮಲೇರಿಯಾ ಕಾಯಿಲೆಗಳಿಗೆ ಸುಲಭ ರೀತಿಯಲ್ಲಿ ಔಷಧಿಗಳು ಜನಸಾಮಾನ್ಯರ ಕೈಗೆಟುಕುವಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದ್ದು, ಜೊತೆಗೆ ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಅವರಿಗೆ ಚಿಕಿತ್ಸೆ ಸಿಗುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರು ಆರೋಗ್ಯಾಧಿಕಾರಿ ಬಳಿ ಮನವಿ ಮಾಡಿದರು.
► Follow us on – Facebook / Twitter / Google+