ಹಾಲಿ ಪ್ರಧಾನಿ ಮೋದಿ ಯವರನ್ನು ಭೇಟಿಮಾಡಲಿರುವ ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು, ಸೆ.9-ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನವದೆಹಲಿಯ ಪ್ರಧಾನಿಯವರ ನಿವಾಸದಲ್ಲಿ ಗೌಡರು ಮೋದಿಯವರನ್ನು ಭೇಟಿ ಮಾಡಿ ಕಾವೇರಿ ವಿಷಯದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ರಾಜ್ಯದ ಪರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲರಾದ ಪಾಲಿ ಎಸ್.ನಾರಿಮನ್ ಹಾಗೂ ಅನಿಲ್ ದಿವಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಿನ್ನೆ ರಾತ್ರಿ ಅನಿಲ್ ದಿವಾನ್ ಅವರನ್ನು ಭೇಟಿಯಾಗಿದ್ದ ದೇವೇಗೌಡರು, ಸುಪ್ರೀಂಕೋರ್ಟ್ನ ನಿರ್ದೇಶನದಂತೆ ರಾಜ್ಯಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿದೆ. ರಾಜ್ಯದ ಜಲಾಶಯಗಳಲ್ಲಿ ಬೇರೆ ರಾಜ್ಯಕ್ಕೆ ನೀರು ಬಿಡುವಂತಹ ಪ್ರಮಾಣದಲ್ಲಿ ನೀರಿಲ್ಲ. ಕುಡಿಯುವ ನೀರು ಹಾಗೂ ಬೆಳೆದು ನಿಂತ ಬೆಳೆಗೆ ನೀರಿಲ್ಲದ ಸಂಕಷ್ಟ ಪರಿಸ್ಥಿತಿ ಉಂಟಾಗಿದೆ.
ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು, ರೈತರು ರಸ್ತೆಗಿಳಿದು ನಿತ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್ ಕೂಡ ಆಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಕ್ಕಟ್ಟು ಪರಿಹಾರ ಕುರಿತಂತೆ ವಕೀಲರೊಂದಿಗೆ ಸಮಾಲೋಚನೆ ನಡೆದಿದ್ದಾರೆ. ಇಂದು ಪಾಲಿ ಎಸ್.ನಾರಿಮನ್ ಅವರನ್ನು ಭೇಟಿಯಾದ ಗೌಡರು ಕಾವೇರಿ ನದಿ ನೀರು ಹಂಚಿಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಂದು ಸಂಜೆ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಲಿರುವ ಗೌಡರು, ರಾಜ್ಯದ ರೈತರ ಹಾಗೂ ಕುಡಿಯುವ ನೀರಿನ ಹಿತ ಕಾಪಾಡುವಂತೆ ಕ್ರಮಕೈಗೊಳ್ಳಲು ಮನವಿ ಮಾಡುವ ಸಾಧ್ಯತೆಗಳಿವೆ ಎಂದು ಜೆಡಿಎಸ್ನ ಉನ್ನತ ಮೂಲಗಳು ತಿಳಿಸಿವೆ.
► Follow us on – Facebook / Twitter / Google+