ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಭಾರೀ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Rohini--02

ಬೆಂಗಳೂರು, ಏ.17-ತಮ್ಮ ಖಡಕ್ ನಿರ್ಧಾರಗಳ ಮೂಲಕವೇ ರಾಜ್ಯದ ಮನೆ ಮಾತಾಗಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಭಾರೀ ಹಿನ್ನಡೆಯಾಗಿದೆ. ಹಾಸನದಿಂದ ಮೈಸೂರು ಜಿಲ್ಲೆಗೆ ವರ್ಗಾವಣೆ ಮಾಡಿದ್ದ ರಾಜ್ಯಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಆಡಳಿತ ನ್ಯಾಯಾಧಿಕರಣ (ಸಿಎಟಿ)ವು ರೋಹಿಣಿ ಸಿಂಧೂರಿ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಇದರಿಂದ ಸಿಂಧೂರಿಗೆ ಭಾರೀ ಹಿನ್ನಡೆಯಾಗಿದ್ದು, ಹಾಸನದಿಂದ ಇದೀಗ ಮೈಸೂರಿಗೆ ವರ್ಗಾವಣೆಯಾಗಬೇಕಿದೆ. ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ ಅವರು ಮೊದಲು ಕರ್ನಾಟಕ ಆಡಳಿತ ನ್ಯಾಯಾಧಿಕರಣ (ಕೆಎಟಿ)ಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಇತ್ತೀಚೆಗೆ ರೋಹಿಣಿ ಸಿಂಧೂರಿ ಮತ್ತು ಪಶುಸಂಗೋಪನಾ ಸಚಿವ ಎ.ಮಂಜು ನಡುವೆ ಭಾರೀ ವಾಕ್ಸಮರವೇ ನಡೆದಿತ್ತು. ಅವರ ಕುಮ್ಮಕ್ಕಿನಿಂದಲೇ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅರಕಲಗೂಡು ಕ್ಷೇತ್ರದ ಶಾಸಕರಾಗಿರುವ ಎ.ಮಂಜು ಕೆಲ ದಿನಗಳ ಹಿಂದೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಅವರಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ನೋಟೀಸ್‍ನಲ್ಲಿ ಸಮರ್ಪಕ ಉತ್ತರ ನೀಡದ ಕಾರಣ ಜಿಲ್ಲಾಧಿಕಾರಿಯಾಗಿರುವ ರೋಹಿಣಿ ಎಫ್‍ಐಆರ್ ದಾಖಲಿಸಿದ್ದರು.

ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಕಲಗೂಡು ತಹಶೀಲ್ದಾರ್ ಅವರನ್ನು ಅಮಾನತು ಮಾಡಲಾಗಿತ್ತು. ತಮ್ಮ ವಿರುದ್ಧ ರೋಹಿಣಿ ಸಿಂಧೂರಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡು ಈ ಆರೋಪ ಮಾಡುತ್ತಿದ್ದಾರೆ ಎಂದು ಮಂಜು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್‍ಗೆ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ಚುನಾವಣಾ ಆಯೋಗದ ಅಧಿಕಾರಿಗಳು ಎ.ಮಂಜು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂಬ ವರದಿ ನೀಡಿತ್ತು. ಈಗ ಸಿಎಟಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿರುವ ಕಾರಣ ರೋಹಿಣಿ ಸಿಂಧೂರಿ ಹಾಸನದಿಂದ ವರ್ಗಾವಣೆಯಾಗಲಿದ್ದಾರೆ.

Facebook Comments

Sri Raghav

Admin