ಹಾಸ್ಟೆಲ್‍ ಅವ್ಯವಸ್ಥೆ : ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

mala

ಮಳವಳ್ಳಿ, ನ.17- ಹಾಸ್ಟೆಲ್‍ನಲ್ಲಿ ಮೂಲ ಸೌಕರ್ಯವಿಲ್ಲ, ಊಟವೂ ಇಲ್ಲದೆ ಹಸಿವಿನಿಂದ ನರಳುವಂತಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ವಿದ್ಯಾರ್ಥಿಗಳು ಪೊಲೀಸರ ಮೊರೆ ಹೋದ ಘಟನೆ ಪಟ್ಟಣದಲ್ಲಿ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ತಿಂಡಿ, ಊಟ ನೀಡದೆ ಹಸಿವಿನಿಂದ ಗೋಳಿಡುವಂತೆ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಶಿವಮೂರ್ತಿ, ಹಾಸ್ಟೆಲ್‍ನಲ್ಲಿ ಬಿಎ, ಬಿಎಡ್, ಪಿಯುಸಿ ಸೇರಿದಂತೆ 50 ವಿದ್ಯಾರ್ಥಿಗಳಿದ್ದೇವೆ. ಕಳೆದ ಮೂರು ದಿನಗಳಿಂದ ಊಟ, ತಿಂಡಿ ಕೊಡದೆ ಇರುವುದರಿಂದ ತುಂಬ ತೊಂದರೆಯಾಗಿದೆ. ಈ ಬಗ್ಗೆ ವಾರ್ಡನ್ ಕೇಳಿದರೆ ಅಕ್ಕಿ ಇಲ್ಲ, ನಾನೇನು ಮನೆಯಿಂದ ತಂದು ಕೊಡಲೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು. ನಾವುಗಳು ದೂರು ನೀಡಿದ ಮೇಲೆ ಇಬ್ಬರು ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಈಗಿರುವ ಅಧಿಕಾರಿಗೂ ಸಮಸ್ಯೆಗಳನ್ನು ಮೌಖಿಕವಾಗಿ ಮತ್ತು ಲಿಖಿತವಾಗಿ ತಿಳಿಸಲಾಗಿದೆ. ಹೀಗೆ ಬರುವ ಅಧಿಕಾರಿಗಳಿಗೆಲ್ಲ ಸಮಸ್ಯೆ ಕುರಿತು ದೂರು ಸಲ್ಲಿಸಿದರೂ ಯಾವುದೇ ಉಪಯೋಗವಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ವಿದ್ಯುತ್, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಇಲ್ಲಿನ ಗ್ರಂಥಾಲಯಕ್ಕೆ ಬೀಗ ಜಡಿಯಲಾಗಿದೆ. ಅಡುಗೆಯವರು ರುಚಿ ಮತ್ತು ಶುಚಿ ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು. ಸಮಸ್ಯೆ ಬಗೆಹರಿಸುವೆ: ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ತಾಪಂ ಅಧ್ಯಕ್ಷ ಆರ್.ಎಂ.ವಿಶ್ವಾಸ್, ಪುರಸಭಾಧ್ಯಕ್ಷ ರಿಯಾಜಿನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪವನ್ ಅವರುಗಳು ಕೂಡಲೆ ಊಟದ ವ್ಯವಸ್ಥೆ ಮಾಡುತ್ತೇವೆ. ಶೌಚಾಲಯ ದುರಸ್ತಿ, ವಿದ್ಯುತ್ ಸಮಸ್ಯೆಯನ್ನು ನಾಳೆಯೇ ಬಗೆಹರಿಸುತ್ತೇವೆ. ಇನ್ನುಳಿದ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ವಾರ್ಡನ್ ವೆಂಕಟಾಚಲ ಅಡುಗೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಎಲ್ಲ ಸಮಸ್ಯೆಗಳನ್ನೂ ಹಂತ ಹಂತವಾಗಿ ಬಗೆಹರಿಸುವುದಾಗಿ ತಿಳಿಸಿದರು.

Facebook Comments

Sri Raghav

Admin