ಹಿಂದುಳಿದ ವರ್ಗದವರಿಗೆ ಧ್ವನಿ ನೀಡಿದವರು ಬಿಎಸ್‍ವೈ : ಶೋಭಾ

ಈ ಸುದ್ದಿಯನ್ನು ಶೇರ್ ಮಾಡಿ

shobha-karandlaje
ನಂಜನಗೂಡು, ಮಾ.25- ಕಾಂಗ್ರೆಸ್ ಪಕ್ಷದ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಿಂದುಳಿದವರ ಹೆಸರಿನಲ್ಲಿ ಮುಂದೆ ಬಂದು ಆಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಯ ಮಾಡಿದ್ದಾರೆ, ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಹಿಂದುಳಿದವರ ಧ್ವನಿಯಾಗಿದ್ದಾರೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.ವಿಧಾನ ಸಭಾ ಕ್ಷೇತ್ರದ ದೇವರಸನಹಳ್ಳಿ, ಶ್ರೀನಗರ, ಸಿಂಗಾರಿಪುರ, ಹೆಡತಲೆ, ಹೆಮ್ಮರಗಾಲ, ಮಲ್ಲಹಳ್ಳಿ, ಮುಂತಾದ ಗ್ರಾಮಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವ ಮತ್ತು ಕಾರ್ಯಕರ್ತರ ಪ್ರೋತ್ಸಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಲವತ್ತು ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ರವರು ಯಾವುದೇ ಕಪ್ಪುಚುಕ್ಕಿ ಇಲ್ಲದೆ ರಾಜಕಾರಣ ಮಾಡಿದರು. ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಈ ಭಾಗದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ ಇಂಥ ವ್ಯಕ್ತಿಯನ್ನು ಸಿದ್ದರಾಮಯ್ಯ ರವರು ಅವಮಾನ ಮಾಡಿರುವುದು ಖಂಡನೀಯ, ಎಂದ ಅವರು ಈ ಉಪಚುನಾವಣೆಯಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವುದರ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಬಿಜೆಪಿಗೆ ಮತಗಟ್ಟೆ ಅಗತ್ಯವಾಗಿದ್ದು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ಬಿಜೆಪಿ ಪಕ್ಷ ಮತಗಳನ್ನು ಗಟ್ಟಿ ಮಾಡಿಕೊಂಡು ಕಾಂಗ್ರೆಸ್ ಮತಗಳನ್ನು ನಮ್ಮ ಕಡೆಗೆ ಸೆಳೆಯುವ ಪ್ರಯತ್ನ ಮಾಡಬೇಕು ಎಂದರು. ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ರವರ ಸರ್ಕಾರ ಆಡಳಿತ ಸಂಪೂರ್ಣ ಕುಸಿದಿದೆ. ಈ ಸರ್ಕಾರದಿಂದ ಜನರು ಭ್ರಮ ನಿರಶನಗೊಂಡಿದ್ದಾರೆ. ಏ.9 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಬೇಕು ಎಂದರು.

ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ವಿ.ಫಣೀಶ್, ತಾಲ್ಲೂಕು ಅಧ್ಯಕ್ಷ ಕೆಂಡಗಣಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಡಾ.ಶಿವರಾಂ, ಮಾಜಿ ಎಪಿಎಂಸಿ ಉಪಾಧ್ಯಕ್ಷ ಹೆಡತಲೆ ದೊರೆಸ್ವಾಮಿನಾಯಕ, ದೇವರಸನಹಳ್ಳಿ ಮಹದೇವು, ನಿಧಿ ಸುರೇಶ, ಹೆಮ್ಮರಗಾಲದ ಸೋಮಣ್ಣ, ಉಪ್ಪಾರ ಜನಾಂಗದ ಖಜಾಂಚಿ ಮಾಡ್ರಹಳ್ಳಿ ಸಿದ್ದಶೆಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin