ಹಿಂದೂ ಮತಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿಯಿಂದ ಮಾಸ್ಟರ್ ಪ್ಲಾನ್ ರೆಡಿ..!

ಈ ಸುದ್ದಿಯನ್ನು ಶೇರ್ ಮಾಡಿ

BJP--0011

– ರವೀಂದ್ರ. ವೈ.ಎಸ್.

ಬೆಂಗಳೂರು, ಅ.25-ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೊಸ ಪ್ರಯೋಗಗಳ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲು ಮುಂದಾಗಿರುವ ಬಿಜೆಪಿ ಕೆಲವು ಕಡೆ ಮಠಾಧಿಪತಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮೂಲಕ ಹಿಂದೂ ಮತಗಳ ಧೃವೀಕರಣಗೊಳಿಸುವಲ್ಲಿ ಯಶಸ್ವಿಯಾಗಿದ್ದ ಸಂಘ ಪರಿವಾರ ರಾಜ್ಯದ 8 ರಿಂದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಕಾವಿಧಾರಿಗಳನ್ನು ಅಖಾಡಕ್ಕಿಳಿಸಲು ಚಿಂತನೆ ನಡೆಸಿದೆ. ಈಗಾಗಲೇ ಗೆಲ್ಲುವ ಕ್ಷೇತ್ರಗಳನ್ನು ತಲಾಷ್ ಮಾಡಿರುವ ವರಿಷ್ಠರು ಸ್ವಾಮೀಜಿಗಳನ್ನು ಚುನಾವಣಾ ಕಣಕ್ಕೆ ತರುವ ಮೂಲಕ ಹಿಂದೂ ಮತಗಳು ಛಿದ್ರವಾಗದಂತೆ ಹಿಡಿದಿಟ್ಟುಕೊಳ್ಳುವುದು ಇದರ ಮೂಲ ಉದ್ದೇಶ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅತಿಯಾಗಿ ನಂಬಿರುವ ಅಹಿಂದ ಮತಗಳ ಭದ್ರ ಕೋಟೆಯನ್ನು ಛಿದ್ರ ಮಾಡಲು ಆರ್‍ಎಸ್‍ಎಸ್ ಚಿಂತಕರ ಚಾವಡಿ ಈ ರಣತಂತ್ರ ರೂಪಿಸಿದೆ. ಈ ಹಿಂದೆ ನಡೆದ ವಿಧಾನಸಭೆ, ಇಲ್ಲವೆ ಲೋಕಸಭೆ ಚುನಾವಣೆಯಲ್ಲಿ ಮಠಾಧಿಪತಿಗಳು ನೇರವಾಗಿ ಚುನಾವಣಾ ಕಣಕ್ಕೆ ಧುಮುಕುತ್ತಿರಲಿಲ್ಲ. ಬದಲಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಮ್ಮ ಬೇಕಾದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಸದ್ದಿಲ್ಲದೆ ಭಕ್ತರಿಗೆ ಸೂಚನೆ ನೀಡುತ್ತಿದ್ದರು.

ಉತ್ತರ ಪ್ರದೇಶದಲ್ಲಿ ಗೋರಖ್‍ಪುರ ಸಂಸದರಾಗಿದ್ದ ಹಾಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ನಡೆಸಿತ್ತು. ಒಂದೆಡೆ ಉಗ್ರ ಹಿಂದುತ್ವ ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿಯ ಅಭಿವೃದ್ಧಿ ಮಂತ್ರ. ಇದರ ಪರಿಣಾಮ ಯಾರೂ ನಿರೀಕ್ಷಿಸದ ರೀತಿಯಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‍ನಲ್ಲಿ ಬಿಜೆಪಿ ಎದುರಾಳಿಗಳನ್ನು ಹೇಳ ಹೆಸರಿಲ್ಲದಂತೆ ಹೊಸಕಿ ಹಾಕಿ ಅಧಿಕಾರ ಹಿಡಿಯಿತು. ಈಗ ರಾಜ್ಯದಲ್ಲೂ ಇದೇ ತಂತ್ರ ಅನುಸರಿಸುತ್ತಿರುವ ಕಮಲ ಪಡೆ ತನ್ನ ಉದ್ದೇಶಿತ ಮಿಷನ್ 150 ಈಡೇರಬೇಕಾದರೆ ಹಿಂದೂ ಮತಗಳ ಧೃವೀಕರಣವಾಗಲೇಬೇಕೆಂಬ ನಿಶ್ಚಯಕ್ಕೆ ಬಂದಿದೆ.

ಯಾರ್ಯಾರು ಅಖಾಡಕ್ಕೆ:

ಮೂಲಗಳ ಪ್ರಕಾರ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಮೇಲುಕೋಟೆ ಬೇಬಿ ಗ್ರಾಮದ ಮಾರ್ಕಂಡೇಶ್ವರ ಮಹಾಂತ ಶಿವಯೋಗಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿ, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಧಾರವಾಡದ ಶ್ರೀ ಬಸವಾನಂದಸ್ವಾಮೀಜಿ, ಬಾಗಲಕೋಟೆ ಜಿಲ್ಲೆಯ ಶ್ರೀ ರಾಮರುದ್ರ ಸ್ವಾಮೀಜಿ, ಹಾವೇರಿ ಜಿಲ್ಲೆಯ ಶರಣ ಬಸವೇಶ್ವರ ಮಠದ ಶ್ರೀ ಪ್ರಣಾವನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧಿಪತಿಗಳು ಸ್ಪರ್ಧಿಸಲು ಒಲವು ತೋರಿದ್ದಾರೆ.

ಈಗಾಗಲೇ ಸಂಘ ಪರಿವಾರ, ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿರುವ ಶ್ರೀಗಳು ಟಿಕೆಟ್ ನೀಡಿದರೆ ತಾವು ಸ್ಪರ್ಧಿಸುವುದು ಖಚಿತ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮೀಜಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಈ ಸಂಬಂಧ ರಾಜ್ಯದ ನಾಯಕರ ಜೊತೆ ಮಾತುಕತೆ ನಡೆಸಿ ಟಿಕೆಟ್ ನೀಡಿದರೆ ತಾವು ಸ್ಪರ್ಧೆಗೆ ಸಿದ್ಧರಿರುವುದಾಗಿ ಹೇಳಿದ್ದಾರೆ.

ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರ ಇಲ್ಲವೆ, ಹೊಳಲ್ಕೆರೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮಾದಾರ ಚೆನ್ನಯ್ಯ ಸ್ವಾಮೀಜಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಪ್ರತಿನಿಧಿಸುವ ಹೊಳಲ್ಕೆರೆ ಇಲ್ಲವೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಶ್ರೀಗಳನ್ನು ಕಣಕ್ಕಿಳಿಸಲು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶೇಷ ಒಲವು ತೋರಿದ್ದಾರೆ. ತಮಗೆ ಲೋಕಸಭೆಗಿಂತ ವಿಧಾನಸಭೆಗೆ ಟಿಕೆಟ್ ನೀಡಿದರೆ ಹೊಳಲ್ಕೆರೆಯಿಂದ ಸ್ಪರ್ಧಿಸುವುದಾಗಿ ಸ್ವಾಮೀಜಿ ಯಡಿಯೂರಪ್ಪ ಬಳಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹೊಳಲ್ಕೆರೆಯಲ್ಲಿ ಸ್ವಾಮೀಜಿ ಪರ ಭಕ್ತರು ಒಂದು ಸುತ್ತಿನ ಪ್ರಚಾರವನ್ನು ನಡೆಸಿದ್ದಾರೆ. ಇದು ಆಂಜನೇಯ ಅವರಿಗೆ ನಿದ್ದೆಗೆಡುವಂತೆ ಮಾಡಿರುವುದು ಸುಳ್ಳಲ್ಲ.

ಧಾರವಾಡ ಜಿಲ್ಲೆ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಬಿಜೆಪಿ ಅಭ್ಯರ್ಥಿಯಾಗಲು ಮುಂದೆ ಬಂದಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಖುದ್ದು ಸ್ವಾಮೀಜಿ ಸೇರಿದಂತೆ ಭಕ್ತರು ಕೂಡ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಧಾರ್ಮಿಕ ಮುಖಂಡರಾಗಿರುವ ಸ್ವಾಮೀಜಿ ಕ್ಷೇತ್ರದಲ್ಲಿ ಕೆಲವು ಅನಿಷ್ಟ ಪದ್ಧತಿಗಳು, ಮದ್ಯಪಾನ, ಧೂಮಪಾನ, ಹೆಣ್ಣು ಭ್ರೂಣ ಹತ್ಯೆ, ಮೂಢನಂಬಿಕೆ ಸೇರಿದಂತೆ ಮತ್ತಿತರರ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ನೀರಿನ ಮಹತ್ವ, ಕೆರೆಗಳ ರಕ್ಷಣೆ, ಕೆರೆಗಳಲ್ಲಿ ಹೂಳೆತ್ತುವುದು, ಗೋರಕ್ಷಣೆ, ಆಧುನಿಕ ಕೃಷಿ ಪದ್ಧತಿ ಸೇರಿದಂತೆ ಹತ್ತು, ಹಲವು ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರಿಗೆ ಪತ್ರ ಬರೆದಿರುವ ಸ್ವಾಮೀಜಿ, ಕಲಘಟಗಿಯಿಂದ ತಾವು ಸ್ಪರ್ಧೆಗೆ ಸಿದ್ಧ. ನನಗೆ ಅಧಿಕಾರದ ಆಸೆಯಿಲ್ಲ, ಆದರೆ ಜನಸೇವೆ ಮಾಡಬೇಕೆಂಬ ಇಚ್ಛೆಯಿಂದ ರಾಜಕೀಯಕ್ಕೆ ಬರುತ್ತಿದ್ದೇನೆ. ಯಾವ ಲಾಬಿಗೂ ಮಣಿಯದೆ ಟಿಕೆಟ್ ನೀಡಬೇಕೆಂದು ಕೋರಿದ್ದಾರೆ.
ಬಾಗಲಕೋಟೆ ಜಿಲ್ಲೆ ಬಿಳಗಿ ವಿಧಾನಸಭಾ ಕ್ಷೇತ್ರದಿಂದ ಶ್ರೀ ರಾಮರುದ್ರ ಸ್ವಾಮೀಜಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಲಿ ಶಾಸಕ ಜಿ.ಆರ್.ಪಾಟೀಲ್ ಈ ಕ್ಷೇತವನ್ನು ಪ್ರತಿನಿಧಿಸುತ್ತಿದ್ದಾರೆ.

ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಇದೇ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ವರಿಷ್ಠರ ಬಳಿ ಪಟ್ಟು ಹಿಡಿದಿದ್ದಾರೆ. ಕ್ಷೇತ್ರದಲ್ಲಿ ಸ್ವಾಮೀಜಿ ಮತ್ತು ಭಕ್ತ ಮಹಾಶಯರು ಪ್ರಚಾರ ಆರಂಭಿಸಿರುವುದರಿಂದ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲ ಹೈಕಮಾಂಡ್‍ಗೆ ಎದುರಾಗಿದೆ.
ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಅರೆಮಲ್ಲೂರು ಗ್ರಾಮದ ಶರಣ ಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಕೂಡ ಸ್ಪರ್ಧೆಗೆ ಮುಂದೆ ಬಂದಿದ್ದಾರೆ. ಕಾಂಗ್ರೆಸ್ ಅಹಿಂದ ಮತಗಳನ್ನು ನೆಚ್ಚಿಕೊಂಡು ಚುನಾವಣೆಗೆ ಸಜ್ಜಾಗಿದ್ದರೆ, ಬಿಜೆಪಿ ಕಾವಿಧಾರಿಗಳ ಮೂಲಕ ಹಿಂದುತ್ವ ಪ್ರಯೋಗಕ್ಕೆ ಮುಂದಾಗಿದೆ.

Facebook Comments

Sri Raghav

Admin