ಹಿಂಸಾಚಾರ ಪೀಡಿತ ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Kashmir

ನವದೆಹಲಿ, ಮೇ 22– ಹೆಚ್ಚುತ್ತಿರುವ ಉಗ್ರರ ಉಪಟಳ, ಸೈನಿಕರ ಮೇಲೆ ನಿರಂತರ ಕಲ್ಲು ತೂರಾಟ ಸೇರಿದಂತೆ ಹಿಂಸಾಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಸ್ಥಿತಿ ಮುಂದುವರಿದರೆ ರಾಷ್ಟ್ರಪತಿ ಆಳ್ವಿಕೆ ತರುವ ಎಲ್ಲ ಸಾಧ್ಯತೆಗಳಿವೆ. ರಾಜ್ಯದಲ್ಲಿ ಪರಿಸ್ಥಿತಿ ತಿಳಿಯಾಗುವವರೆಗೂ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಅಲ್ಲಿನ ರಾಜ್ಯಪಾಲ ಎ.ಎನ್ ವೋಹ್ರ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದಾರೆ.  ಆದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿದರೆ ಪ್ರತಿಪಕ್ಷಗಳು ಇದನ್ನೇ ಚುನಾವಣಾ ಅಸ್ತ್ರ ಮಾಡಿಕೊಳ್ಳಬಹುದೆಂಬ ಭೀತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ. ಹೀಗಾಗಿ ರಾಜ್ಯಪಾಲರ ವರದಿ ಕಾರ್ಯಗತವಾಗುವುದೇ ಎಂಬ ಪ್ರಶ್ನೆ ಎದುರಾಗಿದೆ.ಕಳೆದ ಮೂರು ದಿನಗಳಿಂದ ಕಣಿವೆ ರಾಜ್ಯದ ಸ್ಥಿತಿಗತಿ ಕುರಿತಂತೆ ಗೃಹ ಸಚಿವ ರಾಜ್‍ನಾಥ್ ಸಿಂಗ್ ಹಿರಿಯ ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸಿದ್ದಾರೆ. ಭದ್ರತಾ ಸಲಹೆಗಾರ ಅಜಿತ್ ದೋವಲ್ ,ಹಿರಿಯ ಸೇನಾಧಿಕಾರಿಗಳು, ರಾಜ್ಯಪಾಲರು ಸೇರಿದಂರೆ ಮತ್ತಿತರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿತ್ತು.  ರಾಜ್ಯದಲ್ಲಿ ಸದ್ಯದ ಸ್ಥಿತಿ ಮುಂದುವರಿದರೆ ರಾಷ್ಟ್ರಪತಿ ಆಳ್ವಿಕೆ ತರುವುದು ಒಂದೇ ಪರಿಹಾರ ಮಾರ್ಗ. ಆಗ ಭದ್ರತಾ ಪಡೆಗಳಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬಹುದು. ಭಯೋತ್ಪಾದಕರು ಹಾಗೂ ಪ್ರತಿಭಟನಾನಿರತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅದೇ ಸರಿ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ಆಡಳಿತರೂಢ ಪಿಡಿಪಿ- ಬಿಜೆಪಿ ನೇತೃತ್ವದ ಸರ್ಕಾರ ಪರಿಸ್ಥಿತಿ ಹತೋಟಿಗೆ ತರಲು ವಿಫಲವಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಆದ್ದರಿಂದ ಇಂಥ ಸ್ಥಿತಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ತರುವುದೇ ಸರಿ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ರಾಜ್ಯಪಾಲ ವೋಹ್ರಾ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಸದ್ಯ ಮುಂದಿರುವ ಏಕೈಕ ಪರಿಹಾರ ಎಂದು ಗೃಹ ಇಲಾಖೆಗೆ ವರದಿ ನೀಡಿದ್ದಾರೆಂದು ತಿಳಿದು ಬಂದಿದೆ.

ಕಾಶ್ಮೀರ ಪರಿಸ್ಥಿತಿ ಒಂದೆಡೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೆ, ಮತ್ತೊಂದೆಡೆ ರಾಜಕೀಯ ಪಕ್ಷಗಳ ತಿಕ್ಕಾಟ ಕೂಡ ತಾರಕ್ಕೇರತೊಡಗಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ನ್ಯಾಷನಲ್ ಕಾನ್ಫರೆನ್ಸ ನಾಯಕ ಒಮರ್ ಅಬ್ದುಲ್ಲಾ ಆಗ್ರಹಿಸುತ್ತಿದ್ದಾರೆ.  ಪ್ರಸ್ತುತ ರಾಜ್ಯದಲ್ಲಿ ಕತ್ತಲು ಕವಿದಿದ್ದು, ಬೇರೇನೂ ಕಾಣಿಸುತ್ತಿಲ್ಲ. ಕಾಶ್ಮೀರದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಮೀರಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಈ ಮಟ್ಟಕ್ಕೆ ಹಾಳಾಗಿದ್ದರೂ, ಮೆಹಬೂಬಾ ಮುಫ್ತಿ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿತನ ಬೇರೆಯಿಲ್ಲ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಬಂದಾಗಿನಿಂದಲೂ ಪರಿಸ್ಥಿತಿ ಕೈಮೀರಿ ಹೋಗಿದೆ. ವಿನಾಶಕ್ಕಷ್ಟೇ ರಾಜ್ಯ ಸಾಕ್ಷಿಯಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್‍ನಾಥ್ ಸಿಂಗ್ ಸಭೆ:

ಕಾಶ್ಮೀರ ಹಿಂಸಾಚಾರ ಕುರಿತಂತೆ ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರೀಯಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಪರಿಸ್ಥಿತಿ ಕುರಿಂತೆ ಅವಲೋಕನ ನಡೆಸಿದ್ದಾರೆಂದು ತಿಳಿದುಬಂದಿದೆ.   ಸಭೆಯಲ್ಲಿ ಉನ್ನತಾಧಿಕಾರಿಗಳು ಕಾಶ್ಮೀರ ಪರಿಸ್ಥಿತಿ ಕುರಿತಂತೆ ವರದಿ ಗಳನ್ನು ನೀಡಿದ್ದಾರೆ. ಅಲ್ಲದೆ, ಪರಿಸ್ಥಿತಿ ನಿಯಂತ್ರಣಕ್ಕೆ ಈಗಾಗಲೇ ತೆಗೆದುಕೊಂಡಿರುವ ಕ್ರಮದ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಂದು ಮೂಲಗಳು ತಿಳಿಸಿವೆ.ಸಭೆಯಲ್ಲಿ ಪ್ರತ್ಯೇಕತಾವಾದಿಗಳ ಜೊತೆಗೆ ಶಾಂತಿಯುತ ಮಾತುಕತೆ ನಡೆಸುವ ಕುರಿತಂತೆಯೂ ಮಾತುಕತೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಸಂವಿಧಾನದ ಅಡಿಯಲ್ಲಿ ಯಾರೊಂದಿಗೆ ಬೇಕಾದರೂ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ರಾಜನಾಥ್ ಅವರು ತಿಳಿಸಿದ್ದಾರೆ. ಆದರೆ, ಪ್ರತ್ಯೇಕತಾವಾದಿಗಳು ಮಾತ್ರ ಮಾತುಕತೆಗೆ ನಿರಾಕರಿಸಿದ್ದಾರೆ.   ತನಿಖೆಗೆ ಮುಂದಾದ ಕೇಂದ್ರ ಸರ್ಕಾರ :ಪಾಕಿಸ್ತಾನದಿಂದ ಹಣ ಪೂರೈಕೆ ಆಗಿ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಹುಟ್ಟುಹಾಕುತ್ತಿರುವ ಹಿಂಸಾಚಾರವನ್ನು ಹತ್ತಿಕ್ಕುವುದು ಬಹಳ ಮುಖ್ಯ ಎಂಬುದನ್ನು ಕೇಂದ್ರ ಸರಕಾರ ಮನಗಂಡಿದೆ. ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಲು ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನದಿಂದ ಬರುತ್ತಿರುವ ಹಣದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಭದ್ರತಾ ಪಡೆ ಮುಂದಾಗಿದೆ.

ಇನ್ನೂರು ಉಗ್ರವಾದಿಗಳು ಬೀಡು ಬಿಟ್ಟಿದ್ದಾರೆ ಎಂದು ಗುಮಾನಿ ಇರುವ ದಕ್ಷಿಣ ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಕೂಡ ಚಾಲ್ತಿಯಲ್ಲಿದೆ. ಕಾಶ್ಮೀರದಲ್ಲಿನ ಸ್ಥಿತಿ ಗಂಭೀರವಾಗಿದೆ. ಶೀಘ್ರದಲ್ಲಿ ಅದನ್ನು ತಹಬದಿಗೆ ತರಬೇಕು. ಯಾವುದೇ ಕ್ರಮದಿಂದಲೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಆದ್ದರಿಂದ ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾತು ಕತೆ ಇಲ್ಲ:

ಕಾಶ್ಮೀರದಲ್ಲಿ ಕಲ್ಲು ತೂರಾಟ ಮತ್ತು ಸೇನಾ ಪಡೆಗಳ ಪ್ರತೀಕಾರ ಅಂತ್ಯಗೊಳ್ಳುವವರೆಗೂ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿದ್ದಾರೆ.   ಇದೇ ವೇಳೆ ಕಾಶ್ಮೀರ ಸಮಸ್ಯೆ ಶೀಘ್ರದಲ್ಲಿಯೇ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಭ್ರಮೆಯಲ್ಲಿರುವ ಜನರು ಹಾಗೂ ಪ್ರಚೋದನೆಗೊಳಪಡುತ್ತಿ ರುವವರ ಕುರಿತಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin