ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಡಾ.ಹೊ.ಶ್ರೀನಿವಾಸಯ್ಯ ಇನ್ನಿಲ್ಲ.

ಈ ಸುದ್ದಿಯನ್ನು ಶೇರ್ ಮಾಡಿ

Srinivasaiah--01

ಬೆಂಗಳೂರು, ಏ.6-ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ (93) ಇನ್ನಿಲ್ಲ. ಮೂತ್ರಪಿಂಡ ವೈಫಲ್ಯ ಮತ್ತು ಹೃದ್ರೋಗ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳಿಂದ ನಗರದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು.  ಓರ್ವ ಪುತ್ರಿ ಮತ್ತು ಅಪಾರಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ನಗರದ ಗಾಂಧಿ ಭವನಕ್ಕೆ 12 ಗಂಟೆಗೆ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.

Srinivasaiah

ಅಸಂಖ್ಯಾತ ಅಭಿಮಾನಿಗಳು ಅಗಲಿದ ಹಿರಿಯ ಚೇತನರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ಪೊಲೀಸ್ ಗೌರವ ಸಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಸಂಜೆ 7.30ಕ್ಕೆ ಪೆÇಲೀಸ್ ಗೌರವದ ನಂತರ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ನೀಡಲಾಗುವುದು ಎಂದು ಗಾಂಧಿಭವನದ ಮೂಲಗಳು ತಿಳಿಸಿವೆ.   ಡಾ.ಹೊ.ಶ್ರೀನಿವಾಸಯ್ಯ ಅವರು ಮಹಾತ್ಮಗಾಂಧಿಯವರನ್ನು ಭೇಟಿ ಮಾಡಿ ಅವರ ಪ್ರಭಾವಕ್ಕೊಳಗಾಗದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಖಾದಿ ಧರಿಸುತ್ತಿದ್ದವರು. 80 ವರ್ಷಗಳ ಹಿಂದೆ ಎಂಜಿನಿಯರಿಂಗ್ ಪದವಿ ಪಡೆದು ಭಾರತ್ ಎಲೆಕ್ಟ್ರಾನಿಕ್ಸ್‍ನಲ್ಲಿ ಮೆಕಾನಿಕ್ ಎಂಜಿನಿಯರ್ ಆಗಿದ್ದರು.

ರೈಲ್ವೆ ಕೋಚ್ ನಿರ್ಮಾಣದಲ್ಲಿ ಸಾಧನೆ ಮಾಡಿ ಜರ್ಮನಿಯಲ್ಲಿ ತರಬೇತಿ ಪಡೆದಿದ್ದರು. ಸುಮಾರು 80 ಪುಸ್ತಕಗಳನ್ನು ಬರೆದಿರುವ ಹೊ.ಶ್ರೀನಿವಾಸಯ್ಯ ಅವರ ನಾ ಕಂಡ ಜರ್ಮನಿ ಎಂಬುದು ಪಠ್ಯವಾಗಿತ್ತು. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೌದರಿ ಕೊಪ್ಪಲಿನಲ್ಲಿ ಜನಿಸಿದ ಹೊಶ್ರೀಗೆ ತನ್ನ ಊರಿನ ಬಗ್ಗೆ ಇನ್ನಿಲ್ಲದ  ಪ್ರೇಮ, ಅಭಿಮಾನ.  ಕಳೆದ ನಾಲ್ಕು ದಶಕಗಳಿಂದ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾಗಿ, ಗಾಂಧಿಭವನದ ಏಳಿಗೆಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಕರ್ನಾಟಕ ಗಾಂಧಿ ಎಂದೇ ಖ್ಯಾತರಾಗಿದ್ದರು.

ಎಚ್.ಡಿ.ಕುಮಾರಸ್ವಾಮಿ ಅವರಿಂದ ಆರಂಭಗೊಂಡು ಸಿದ್ದರಾಮಯ್ಯ ಅವರ ನಡುವಿನ ಎಲ್ಲಾ ಮುಖ್ಯಮಂತ್ರಿಗಳನ್ನು ಗಾಂಧಿ ಭವನಕ್ಕೆ ಆಹ್ವಾನಿಸಿ ಸರ್ಕಾರ ಗಾಂಧಿ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸಿದ್ದರು. ಅವರ ಆಶಯದಂತೆ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸಲು ಸಿದ್ದರಾಮಯ್ಯ ಅವರು ಆದೇಶಿಸಿರುವುದನ್ನು ಸ್ಮರಿಸಬಹುದು.  ವಾರ್ತಾ ಇಲಾಖೆ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದ ಹೊ.ಶ್ರೀಯವರು ಸಚಿವರಾದ ಎಚ್.ಕೆ.ಪಾಟೀಲ್ ಅವರೊಂದಿಗೆ ವಿಶೇಷ ಒಡನಾಟ ಇಟ್ಟುಕೊಂಡಿದ್ದರು.

ಇಂದು ಅವರ ನಿಧನದಿಂದ ಅಹಿಂಸೆ, ಸರಳತೆ, ತ್ಯಾಗ, ಸತ್ಯ ಪ್ರತಿಪಾದಿಸಿ ವಿಶ್ವಮಾನ್ಯವಾದ ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳನ್ನು ಜೀವನುದದ್ದಕ್ಕೂ ಪಾಲಿಸುತ್ತಾ ಬಂದ ಗಾಂಧೀಜಿಯ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin