ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ತೀವ್ರ ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Dharmendra-01

ಮುಂಬೈ,ಡಿ.21-ಹಿರಿಯ ಬಾಲಿವುಡ್ ನಟ ಧರ್ಮೇಂದ್ರ ತೀವ್ರ ಅಸ್ವಸ್ಥರಾಗಿ ಇಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ 81 ವರ್ಷದ ಧರ್ಮೇಂದ್ರ ಅವರ ದೇಹಸ್ಥಿತಿಯಲ್ಲಿ ನಿನ್ನೆ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.  ಇದೇ ತಿಂಗಳು 8ರಂದು ಲೋನಾವ್ಲಾದ ತಮ್ಮ ತೋಟದ ಮನೆಯಲ್ಲಿ 81ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದ ಅವರ ಆರೋಗ್ಯ ನಿನ್ನೆ ಬಿಗಡಾಯಿಸಿದ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ಸಲಹೆ ಮೇರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನಪ್ರಿಯ ನಟ ಧರ್ಮೇಂದ್ರ ಅವರು 8ನೇ ಡಿಸೆಂಬರ್ 1935ರಂದು ಜನಿಸಿದರು. ಈ ಪಂಜಾಬ್ ಕಾ ಪುತರ್ ಮೂಲ ಹೆಸರು ಧರ್ಮೇಂದ್ರ ಸಿಂಗ್ ಡಿಯೋಲ್. ಪಂಜಾಬ್‍ನ ಲೂದಿಯಾನಾ ಜಿಲ್ಲೆಯ ನುಸ್ರಾಲಿ ಗ್ರಾಮದಲ್ಲಿ ಕೇವಲ್‍ಕಿಷನ್ ಸಿಂಗ್ ಡಿಯೋಲ್ ಮತ್ತು ಸತ್ವಂತ್ ಕೌರ್ ಅವರಿಗೆ ದಂಪತಿಗೆ ಜನಿಸಿದರು.  ಸನೇವಲ್ ಗ್ರಾಮದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಕಳೆದ ಧರ್ಮೇಂದ್, ಲೂದಿಯಾನದ ಲಾಲ್ಟನ್ ಕಲನ್‍ನ ಸರ್ಕಾರಿ ಹಿರಿಯ ಸೆಕೆಂಡರಿ ಸ್ಕೂಲ್‍ನಲ್ಲಿ ವ್ಯಾಸಂಗ ಮಾಡಿದರು. ಇದೇ ಶಾಲೆಯಲ್ಲಿ ಅವರ ತಂದೆ
ಮುಖ್ಯೋಪಾಧ್ಯಾಯರಾಗಿದ್ದರು. 1952ರಲ್ಲಿ ಪಗ್ವಾರದ ರಾಮ್‍ಗರಿಯಾ ಕಾಲೇಜಿನಲ್ಲಿ ಇಂಟರ್‍ಮಿಡಿಯೇಟ್ ಶಿಕ್ಷಣ ಪಡೆದರು.

ಚಲನಚಿತ್ರಗಳಲ್ಲಿ ಸಾಹಸ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದ ಇವರಿಗೆ ಅಭಿಮಾನಿಗಳು ಪ್ರೀತಿಯಿಂದ ಇಟ್ಟ ಹೆಸರು ಆಕ್ಷನ್ ಕಿಂಗ್ ಮತ್ತು ಹೀ-ಮ್ಯಾನ್. 1975ರಲ್ಲಿ ತೆರೆಕಂಡ ಹಿಂದಿ ಚಿತ್ರರಂಗದ ಮಹೋನ್ನತ ಸಿನಿಮಾ ಶೋಲೆಯಲ್ಲಿ ಧರ್ಮೇಂದ್ರರ ವೀರೂ ಪಾತ್ರ ಈಗಲೂ ಅಭಿಮಾನಿಗಳ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ. ಹಿಂದಿ ಚಲನಚಿತ್ರ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ 1997ರಲ್ಲಿ ಫಿಲ್ಮ್‍ಫೇರ್ ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 14ನೇ ಲೋಕಸಛೆಯ ಸದಸ್ಯರಾಗಿದ್ದ ಧರ್ಮೇಂದ್ರ ಭಾರತೀಯ ಜನತಾ ಪಕ್ಷದಿಂದ ರಾಜಸ್ತಾನ ರಾಜ್ಯದ ಬಿಕನೇರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2012ರಲ್ಲಿ ಇವರಿಗೆ ಭಾರತದ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin