ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಉದ್ಯಾವರ ಮಾಧವ ಆಚಾರ್ಯ ರಂಗ ನಿರ್ದೇಶಕ ಕಥೆಗಾರ, ಕವಿ, ನಟ, ಪ್ರಸಿದ್ಧ ಗುಡ್ಡದ ಭೂತ ಧಾರಾವಾಹಿಯ ನಟ, ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕ, ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆಗಳಿಸಿದ ಸಾಧಕ. ನಾಡಿನಾದ್ಯಂತ 50ಕ್ಕೂ ಹೆಚ್ಚು ನಾಟಕ, ನೃತ್ಯರೂಪಕಗಳಿಗೆ ನಿರ್ದೇಶನ ಗೈದ ಇವರು ರಾಜ್ಯರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ ಭಾಜನರಾಗಿದ್ದರು.ಇವರು ಬಾಗಿದ ಮರ,ಬಾಗದೊಡ್ಡಮ್ಮನ ಕಥೆ, ಮುಂತಾದ ಕಥೆ ಸಂಕಲನಗಳು ರಂಗಸ್ಥಳದ ಕನವರಿಕೆಗಳು, ಮುಂತಾದ ಕವನ ಸಂಕಲನಗಳು, ಕೃಷ್ಣನ ಸೋಲು,ರಾಧೆ,ಗಾಂಧಾರಿ, ಮುಂತಾದ ನಾಟಕಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಅದ ವಿಶಿಷ್ಟ ಕೊಡುಗೆಯನ್ನು ನೀಡಿದ್ದರು.

ಶ್ರೀ ಮಾಧವಾಚಾರ್ಯ ಅವರು 1941 ರ ಫೆಬ್ರವರಿ 25 ರಂದು ಜನಿಸಿದ್ದರು.ಸುಮಾರು 80 ವರ್ಷಗಳ ಕಾಲ ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಇವರು ಉಡುಪಿ ಕಲ್ಯಾಣಪುರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪಾನ್ಯಾಸಕರಾಗಿದ್ದು ನಂತರ ಅವರು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಮೂರು ದಶಕಗಳ ಕಾಲ ಅರ್ಥಶಾಸ್ತ್ರ ವಿಷಯದಲ್ಲಿ ಉಪನ್ಯಾಸಕರಾಗಿದ್ದರು.

ಇವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿನ್ನೆ ದಿನಾಂಕ 07-12-2020 ರ ಮಧ್ಯಾಹ್ನ ನಿಧನರಾದರು.ಇವರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರು ಯಕ್ಷಗಾನ ವೃತ್ತಿ ಕಲಾವಿದರಿಗಾಗಿ ಆರಂಭಗೊಂಡ ‘ಪ್ರೊ. ಬಿ. ವಿ. ಆಚಾರ್ಯ ಯಕ್ಷನಿಧಿ’ಯ ಆರಂಭ ಕಾಲದಲ್ಲಿ ವಿಶೇಷವಾಗಿ ಕಾರ್ಯ ನಿರ್ವಹಿಸಿದ್ದರು. 2004ರಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡ ಅಮೇರಿಕಾದಲ್ಲಿ ಜರುಗಿದ ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಿ ಅಮೇರಿಕದಾದ್ಯಂತ 11 ಕಡೆಗಳಲ್ಲಿ ಪ್ರದರ್ಶನ ನೀಡಿತ್ತು.

ಆಚಾರ್ಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಉಡುಪಿಯ ಸಮಸ್ತ ನಾಗರಿಕರು, ಹಾಗೂ ಅವರ ಸಾಹಿತ್ಯಾಭಿಮಾನಿ ಹಾಗೂ ಆತ್ಮೀಯರಾದ ಜಿ.ಎ. ಜಗದೀಶ್,ನಿವೃತ್ತ ಪೊಲೀಸ್ ಅಧೀಕ್ಷಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin