ಹಿರಿಯ ರಂಗಕರ್ಮಿ, ನಾಡೋಜ ಪ್ರಶಸ್ತಿ ಪುರಸ್ಕೃತ ಏಣಗಿ ಬಾಳಪ್ಪ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Enagi-Balappa--01

ಸವದತ್ತಿ, ಆ.18-ಹಿರಿಯ ರಂಗಕರ್ಮಿ, ನಾಡೋಜ ಪ್ರಶಸ್ತಿ ಪುರಸ್ಕೃತ ಏಣಗಿ ಬಾಳಪ್ಪ (103) ಅವರು ಇಂದು ಬೆಳಗ್ಗೆ ನಿಧನರಾದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು, ಬೆಳಗಿನ ಜಾವ 4 ಗಂಟೆಗೆ ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಶತಾಯುಷಿ ಬಾಳಪ್ಪ ಅವರ ಮಗ ವೈದ್ಯರಾಗಿದ್ದರಿಂದ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಐದು ವರ್ಷಗಳ ಹಿಂದೆ ಬಾಳಪ್ಪ ಅವರು ಪಾಶ್ವವಾರ್ಯುವಿಗೆ ತುತ್ತಾಗಿದ್ದರು.ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ನಾಲ್ಕು ಜನ ಹೆಣ್ಣುಮಕ್ಕಳು ಹಾಗೂ ನಾಲ್ಕು ಜನ ಗಂಡು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅವರ ಸ್ವಗ್ರಾಮ ಏಣಗಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಕಲಾವಿದರು, ಗಾಯಕರು, ನೂರಾರು ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿದ್ದ ಏಣಗಿ ಬಾಳಪ್ಪ ಗೋಕಾಕ್ ಚಳವಳಿಯಲ್ಲಿ ಕೂಡ ಮುಂಚೂಣಿಯಲ್ಲಿದ್ದರು.

ಹಂಪಿ ವಿವಿ, ಕರ್ನಾಟಕ ಮತ್ತು ಮೈಸೂರು ವಿವಿ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿರುವ ಇವರು, ಕೇಂದ್ರ ಸಂಸ್ಕøತಿ ವತಿಯಿಂದ ನಾಟಕ ಅಕಾಡೆಮಿ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುಟುಂಬಸ್ಥರಿಂದ ಅವರ 75 ವರ್ಷಗಳ ಸಾಧನೆ ಕುರಿತು ಮ್ಯೂಸಿಯಂ ಮಾಡಲಾಗಿದೆ. ನಾಡೋಜ ಪ್ರಶಸ್ತಿ ಭಾಜನರಾಗಿದ್ದರು. ಅಲ್ಲದೆ, ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ತಮ್ಮ ಆದಾಯದ ಒಂದಷ್ಟು ಭಾಗವನ್ನು ಸಮಾಜ ಸೇವೆಗೂ ಮುಡಿಪಾಗಿಟ್ಟಿದ್ದರು. ಐದು ದಶಕಗಳಿಂದ ಬಣ್ಣದ ಲೋಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜಗಜ್ಯೋತಿ ಬಸವಣ್ಣನವರ ಪಾತ್ರದಿಂದ ಕಲಾಲೋಕದ ಮುಖ್ಯವಾಹಿನಿಗೆ ಬಂದ ಅವರು ಕಲಾ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಅನೇಕ ಕಲಾವಿದರನ್ನು ಹುಟ್ಟುಹಾಕಿದರು. ಜನುಮದ ಜೋಡಿ, ಗಡಿಬಿಡಿ ಕೃಷ್ಣ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಎಂಥವರನ್ನೂ ಮನಸೂರೆಗೊಳ್ಳುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಂತೂ ಏಣಗಿ ಬಾಳಪ್ಪ ಅವರು ಕಲಾಲೋಕದ ಆರಾಧ್ಯ ದೈವವಾಗಿದ್ದರು.

ಅವರ ನಿಧನಕ್ಕೆ ಕಲಾವಿದರು, ರಂಗಭೂಮಿ ಕಲಾವಿದರು, ರಾಜಕೀಯ ಮುಖಂಡರು, ಸಂಘಸಂಸ್ಥೆಗಳು, ಸಾಹಿತಿಗಳು, ಬರಹಗಾರರು ಕಂಬನಿ ಮಿಡಿದಿದ್ದಾರೆ.

Facebook Comments

Sri Raghav

Admin