ಹುಬ್ಬಳ್ಳಿ,ಬೆಳಗಾವಿ,ಗದಗ ಏಕಕಾಲಕ್ಕೆ ಎಸಿಬಿ ದಾಳಿ : ಅಕ್ರಮ ಆಸ್ತಿ ಉಪತಹಶೀಲ್ದಾರ್‍ಗೆ ಬರೆ

ಈ ಸುದ್ದಿಯನ್ನು ಶೇರ್ ಮಾಡಿ

3

ಅಕ್ರಮ ಆಸ್ತಿ ಉಪತಹಶೀಲ್ದಾರ್‍ಗೆ ಬಿಸಿ

ಬೆಳಗಾವಿ,ಫೆ.28- ಆದಾಯ ಮೀರಿದ ಆಸ್ತಿಗಳಿಕೆ ದೂರಿನ ಮೇರೆಗೆ ಉಪ ತಹಶಿಲ್ದಾರ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಇಂದು ಬೆಳಿಗ್ಗೆ ದಾಳಿ ಮಾಡಿ ಪರಿಶೀಲನೆ ಮುಂದುವರೆಸಿದೆ.ಸೈಯದ್ ಅವರ ರಾಮತೀರ್ಥ ನಗರದ ಮನೆ ಮೇಲೆ ದಾಳಿ ಮಾಡಲಾಗಿದ್ದು ದಾಖಲಾತಿ, ಆಭರಣ ಮತ್ತಿತರ ಸಾಮಗ್ರಿಗಳ ತಡಕಾಟ ಪೊಲೀಸರು ನಡೆಸಿದ್ದಾರೆ. ಎಸಿಬಿ ಇನ್ಸ್‍ಪೆಕ್ಟರ್ ಜಿ. ರಘು ಮತ್ತು ಸಿಬ್ಬಂಧಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಆದಾಯ ಮೀರಿದ ಆಸ್ತಿ : ಗ್ರಾಪಂ ಪಿಡಿಓಗೆ ಶಾಕ್

ಗದಗ,ಫೆ.28- ಆದಾಯ ಮೀರಿದ ಆಸ್ತಿಗಳಿಕೆ ದೂರಿನ ಮೇರೆಗೆ ಗ್ರಾಪಂ ಪಿಡಿಓ ನಿವಾಸ ಸೇರಿದಂತೆ ಸಂಬಂದಿಕರ ಮನೆಗಳ ಮೇಲೂ ಜಿಲ್ಲೆಯ ಮೂರು ಕಡೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ಮುಂದುವರೆಸಿದ್ದಾರೆ. ರೋಣ ತಾಲೂಕಿನ ಯಾವಗಲ್ ಗ್ರಾಪಂ ಪಿಡಿಓ ಎಸ್.ವಿ. ಡೊಳ್ಳಿನ್ ಅವರ ವಿರುದ್ಧದ ಅವ್ಯವಹಾರ ಹಾಗೂ ಅಕ್ರಮ ಆಸ್ತಿ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.ಯಾವಗಲ್ ಗ್ರಾಪಂ ಕಚೇರಿ, ಪಿಡಿಓ ಅವರ ಹಿರೇಹಾಳ ಗ್ರಾಮದ ಮನೆ ಹಾಗೂ ಸಂಬಂಧಿಕರ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ನಗರದಲ್ಲಿನ ಪಿಡಿಓ ತಂಗಿ ಸುಜಾತಾ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ನಡುವೆ ಬೆಂಗಳೂರಿನ ಹೊಸಕೋಟೆಯಲ್ಲಿ ಪಿಡಿಓ ಎಸ್.ವಿ. ಡೊಳ್ಳಿನ್ ಅವರ ಅಕ್ಕ ಪರಿಮಳಾ ಅವರ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಮಹತ್ವದ ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ.ಪರಿಮಳಾ ಅವರು ಹೊಸಕೋಟೆಯಲ್ಲಿ ಆರ್.ಎಫ್.ಓ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.ರೋಣ ತಾಲ್ಲೂಕಿನಲ್ಲಿ ಗದಗ ಎಸಿಬಿ ಡಿವೈಎಸ್ಪಿ ಎಂ.ವಿ. ಮಲ್ಲಾಪೂರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಗದಗ ನಗರದಲ್ಲಿ ಬಾಗಲಕೋಟೆ ಎಸಿಬಿ ಡಿವೈಎಸ್ಪಿ ಈರನಗೌಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಮೂರು ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ದಾಳಿ ನಡೆಸಿರೋ ಎಸಿಬಿ ಅಧಿಕಾರಿಗಳು ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಅಧಿಕಾರಿ

ಹುಬ್ಬಳ್ಳಿ,ಫೆ.28– ಅಕ್ರಮ ಆಸ್ತಿ ಗಳಿಕೆ ಮತ್ತು ಆದಾಯಕ್ಕೂ ಮೀರಿದ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಯೊಬ್ಬರ ನಿವಾಸದ ಮೇಲೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ನಗರದಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ. ವಿಶ್ವೇಶ್ವರ ನಗರದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ಮನೆ ಮೇಲೆ ಎಸಿಬಿ ಅಧಿಕಾರಿ ಡಿಎಸ್ಪಿ ಮುದರಡ್ಡಿ ಅವರ ನೇತೃತ್ವದ ಸಿಬ್ಬಂದಿ ಎರಡು ಕಡೆ ಏಕಾಏಕಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿ ಕೊಂಡು ತನಿಖೆ ಮುಂದುವರೆಸಿದ್ದಾರೆ.ದಾಳಿಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಕರ್ನಲ್ ಅವರ ಸಂಬಂಧಿಕರ ಹಾಗೂ ಸ್ನೇಹಿತರ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಈವರೆಗೂ ಅಲ್ಲಿ ದೊರೆತ ದಾಖಲೆ, ಪ್ರಮಾಣ ಪತ್ರ ಸೇರಿದಂತೆ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin