ಹುಬ್ಬಳ್ಳಿಯಲ್ಲಿ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕಾಗಿ ವಿರಾಟ್ ಶಕ್ತಿ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Lingayaty--02

ಹುಬ್ಬಳ್ಳಿ, ನ.5- ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ನಡೆದ ಸಮಾವೇಶದಲ್ಲಿ ಲಿಂಗಾಯತರ ವಿರಾಟ್ ಶಕ್ತಿ ಪ್ರದರ್ಶನ ನಡೆಯಿತು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಹರಿದುಬಂದ ಲಿಂಗಾಯತರು ಒಕ್ಕೊರಲಿನಿಂದ ನಮಗೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿ ಎಂದು ಕೂಗಿದರು. ಲಿಂಗಾಯತ ಉಪಪಂಗಡಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಸ್ವಾಮೀಜಿಗಳು, ರಾಜಕಾರಣಿಗಳು, ಲಿಂಗಾಯತ ಮುಖಂಡರು, ರಾಷ್ಟ್ರೀಯ ಬಸವ ಸೇನಾ ಕಾರ್ಯಕರ್ತರು, ವಿವಿಧ ಘಟನೆಗಳ ಕಾರ್ಯಕರ್ತರು ವೇದಿಕೆ ಬಳಿ ಜಯಘೋಷ ಮೊಳಗಿಸಿದರು.

ನಾನು ಲಿಂಗಾಯತ.. ನಮಗೆ ಸ್ವತಂತ್ರ ಧರ್ಮ ಮಾನ್ಯತೆ ನೀಡಿ ಎಂಬ ಬಾವುಟಗಳನ್ನಿಡಿದು, ಟೋಪಿ ಧರಿಸಿದ ಪುರುಷರು, ಮಹಿಳೆಯರು, ಮಕ್ಕಳು, ವಯೋವೃದ್ಧರು ಶ್ವೇತವಸ್ತ್ರಧಾರಿಗಳಾಗಿ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶ್ರೀ ನಿಜಗುಣಾನಂದ ಸ್ವಾಮೀಜಿ, ಶ್ರೀ ನಾಗನೂರು ಸ್ವಾಮೀಜಿ, ಶ್ರೀ ಮಾತೆ ಮಾದೇವಿ,ಧಾರವಾಡದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ 50ಕ್ಕೂ ಹೆಚ್ಚು ಮಠಾಧೀಶರು, ನಿವೃತ್ತ ಐಎಎಸ್ ಅಧಿಕಾರಿ ಜಮ್ದಾರ್, ಸಚಿವರಾದ ಶರಣಪ್ರಕಾಶ್ ಪಾಟೀಲ್, ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ಶಾಸಕರು, ಸ್ಥಳೀಯ ಮುಖಂಡರು, ಪತ್ರಕರ್ತ ರಂಜಾನ್‍ದರ್ಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ಸಮುದಾಯದ ಜನ ಆಗಮಿಸಿದ್ದರಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಎಲ್ಲೆಡೆಯಿಂದ ಸಮಾವೇಶಕ್ಕೆ ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಸಮಾರಂಭದ ಆರಂಭಕ್ಕೂ ಮುನ್ನ ರೈತಗೀತೆ, ನಾಡಗೀತೆ, ರಾಷ್ಟ್ರಗೀತೆ ಮೊಳಗಿತು. 12ನೆ ಶತಮಾನದಲ್ಲಿ ಬಸವಣ್ಣನವರಿಂದ ಸ್ಥಾಪಿತವಾದ ಸಾಮಾಜಿಕ ನ್ಯಾಯದ ಪ್ರತೀಕವಾದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಲಾಯಿತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳು ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ನೀಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ. ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ. ಆಚಾರ-ವಿಚಾರಗಳು ಬೇರೆ ಬೇರೆಯಾಗಿವೆ. ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಬಸವಣ್ಣನವರ ಅನುಯಾಯಿಗಳಾದ ನಮಗೆ ಪ್ರತ್ಯೇಕ ಧರ್ಮದ ಅಗತ್ಯತೆ ಮತ್ತು ಅನಿವಾರ್ಯತೆ ಇದೆ ಎಂದು ಸ್ವಾಮೀಜಿಗಳು, ರಾಜಕಾರಣಿಗಳು ಪ್ರತಿಪಾದಿಸಿದರು.

ಸ್ವತಂತ್ರ ಧರ್ಮ ಮಾನ್ಯತೆ ವಿಷಯ ಇಂದು-ನಿನ್ನೆಯದಲ್ಲ. ಹಲವು ದಶಕಗಳ ಹಿಂದೆಯೇ ಸ್ವತಂತ್ರ ಧರ್ಮಕ್ಕಾಗಿ ಆಗ್ರಹಿಸಲಾಗಿತ್ತು. ಈಗ ಅದರ ಒತ್ತಡ ಹೆಚ್ಚಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಮಗೆ ಸ್ವತಂತ್ರ ಧರ್ಮದ ಅಗತ್ಯವಿದೆ ಎಂದು ಹೇಳಿದರು. ಜೆಡಿಎಸ್‍ನ ಹಿರಿಯ ಮುಖಂಡ ಲಿಂಗಾಯತ ಸಮಾವೇಶದ ರೂವಾರಿ ಬಸವರಾಜ್ ಹೊರಟ್ಟಿ ಮಾತನಾಡಿ, ವೀರಶೈವ ಮತ್ತು ಲಿಂಗಾಯತರನ್ನು ಒಂದೇ ಎಂದು ಹೇಳುವ ಮೂಲಕ ನಮ್ಮನ್ನು ಕತ್ತಲೆಯಲ್ಲಿಟ್ಟಿದ್ದರು. ನಮ್ಮನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು. ಈಗ ನಾವು ಜಾಗೃತರಾಗಿದ್ದೇವೆ ಎಂದ ಅವರು, ಸಾಧಕ-ಬಾಧಕ ವಿಚಾರಿಸಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮಗೆ ಮೋಸ ಮಾಡಿದವರ ಆಟ ಈಗ ನಡೆಯುವುದಿಲ್ಲ. ಲಿಂಗಾಯತರಾಗಿ ಹುಟ್ಟಿದ ಕಾರಣಕ್ಕೆ ಸಮಾಜದ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಕೆಲಸ. ಬಡ್ಡಿ ವ್ಯವಹಾರ ಮಾಡುವ ದಿಂಗಾಲೇಶ್ವರ ಸ್ವಾಮೀಜಿಗಳ ಟೀಕೆಗೆ ಜಗ್ಗುವುದಿಲ್ಲ. ವೀರಶೈವರು ಲಿಂಗಾಯತ ಧರ್ಮದ ಒಂದು ಪಂಗಡವಾಗಿದ್ದಾರೆ. ನಾವು ಸಮಾವೇಶಕ್ಕೆ ಹಣ ಕೊಟ್ಟು ಯಾರನ್ನೂ ಕರೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸಲು ಆರಂಭಿಸಿದಾಗ ಕೆಲವರು ಹೋರಾಟ ಕೈಬಿಡುವಂತೆ ಒತ್ತಾಯಿಸಿದ್ದರು. ಆದರೆ ಪ್ರತ್ಯೇಕ ಧರ್ಮವಾಗುವವರೆಗೂ ಹೋರಾಟ ಮಾಡಿಯೇ ತೀರುತ್ತೇನೆ ಎಂದು ಹೊರಟ್ಟಿ ಹೇಳಿದರು. ನಮ್ಮ ಹೋರಾಟ ಯಾವುದೇ ಪಕ್ಷ ಅಥವಾ ಧರ್ಮದ ವಿರುದ್ಧ ಅಲ್ಲ. ನಮಗೆ ಬೇಕಾದ ಸೌಲಭ್ಯ ಪಡೆಯಲು ಹೋರಾಡುತ್ತಿದ್ದೇವೆ ಎಂದು ಹೇಳಿದ ಅವರು, ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕರೆ ಸಮಾಜದ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.

Facebook Comments

Sri Raghav

Admin