ಹುಬ್ಬಳ್ಳಿ : ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಇಬ್ಬರು ಸಹೋದರರ ಬರ್ಬರ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

D-11ಹುಬ್ಬಳ್ಳಿ, ಆ.25- ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರು ಸಹೋದರರ ಮೇಲೆ 10 ಜನರ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ಕೇಶ್ವಾಪುರ ಬಳಿ ಗೋಪನಕೊಪ್ಪದ ಅಮರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮಹಮದ್ ಆಜಾದ್ ಕಾರಡಗಿ (22), ಮಹಮದ್ ತೌಸಿಫ್ ಕಾರಡಗಿ (24) ಎಂದು ಗುರುತಿಸಲಾಗಿದೆ.  ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಮಧ್ಯೆ ತೊಳಲಾಡುತ್ತಿರುವ ವಾಸಿಮ್ ಅಕ್ರಮ್ ಕಾರಡಗಿಯನ್ನು ಕಿಮ್ಸ್ಗೆ ದಾಖಲಿಸಲಾಗಿದೆ.

ಘಟನೆ ವಿವರ:

ನೃಪತುಂಗ ಬೆಟ್ಟದ ಬಳಿ ಇರುವ ಕಾಟೇರಿ ಶಾ ಉರುಸಿನ ಸಮಯದಲ್ಲಿ ಪಾರಿವಾಳ ಸಂಬಂಧ ಎರಡು ಗುಂಪಿನ ನಡುವೆ ಜಗಳವಾಯಿತು. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ ಇನ್ನೊಂದು ಗುಂಪಿನ ಸದ್ದಾಂ, ಸಯ್ಯದ್ ಹಾಗೂ ಮೌಲ್ವಿ ಸೇರಿದಂತೆ ಒಟ್ಟು 10 ಜನರ ಗುಂಪು ಹರಿತವಾದ ಮಾರಕಾಸ್ತ್ರಗಳಿಂದ ಕಾರಡಗಿ ಕುಟುಂಬದ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ.  ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತಿಭಟನೆ:

ಆಕ್ರೋಶಗೊಂಡ ಮೃತ ಕುಟುಂಬದ ಸದಸ್ಯರು ಆರೋಪಿಗಳ ಮನೆ ಮುಂದೆ ಪ್ರತಿಭಟನೆ ನಡೆಸಿ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.   ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin