ಹುಬ್ಬೆ ಮಳೆಗೆ ಗಬ್ಬೆದ್ದುಹೋದ ಬಿಬಿಎಂಪಿ ರಸ್ತೆಗಳು, ಡಾಂಬರ್ ಕರ್ಮಕಾಂಡ ಬಯಲು

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar

ಬೆಂಗಳೂರು, ಸೆ.13-ಬಿಬಿಎಂಪಿಯ ಮತ್ತೊಂದು ಕರ್ಮಕಾಂಡವನ್ನು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಬಯಲು ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಡಾಂಬರೀಕರಣಕ್ಕೆ 1,500 ಕೋಟಿ ರೂ. ಖರ್ಚು ಮಾಡಿರುವ ಸರ್ಕಾರ ಭಾರೀ ಅವ್ಯವಹಾರ ಮಾಡಿದೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಮತ್ತು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 17 ತಿಂಗಳ ಅವಧಿಯಲ್ಲಿ ಬೆಂಗಳೂರು ನಗರದ ಮುಖ್ಯರಸ್ತೆಗಳ ಸಾವಿರಾರು ಕೋಟಿ ರೂ.ಗಳ ಡಾಂಬರೀಕರಣ ಕಾಮಗಾರಿ ನೀರು ಪಾಲಾಗಿದೆ. ನೂರಾರು ಕೋಟಿ ಹಣ ವಂಚಕರ ಪಾಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ , ನಗರಾಭಿವೃದ್ಧಿ ಇಲಾಖೆ ಮಹೇಂದ್ರಜೈನ್ ಮತ್ತಿತರರು ಶಾಮೀಲಾಗಿದ್ದು, ಅವರ ವಿರುದ್ಧ ಎಸಿಬಿ, ಇಡಿ ಹಾಗೂ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ.

ನಗರದ ಮುಖ್ಯರಸ್ತೆಗಳ ಕಾಮಗಾರಿಗೆ ಬರೋಬ್ಬರಿ 1,015, 93,82ಕೋಟಿ ರೂ. ವೆಚ್ಚ ಮಾಡಲಾಗಿದೆ. ಡಾಂಬರೀಕರಣ ಮಾಡಲಾದ ನಾಲ್ಕೈದು ತಿಂಗಳ ಅಲ್ಪಾವಧಿಯಲ್ಲಿಯೇ 20 ಸಾವಿರಕ್ಕೂ ಹೆಚ್ಚು ಗುಂಡಿಗಳು ಸೃಷ್ಟಿಯಾಗಿವೆ. ಅತ್ಯಂತ ಕಳಪೆ ಗುಣಮಟ್ಟದ ಡಾಂಬರೀಕರಣದಿಂದ ಹೊಸದಾಗಿ ನಿರ್ಮಿಸಿದ್ದ 707 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಆರೋಪಿಸಿದರು. ರಾಜ್ಯಸರ್ಕಾರ ಮತ್ತು ಬಿಬಿಎಂಪಿಯ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು, ಗುತ್ತಿಗೆದಾರರ ನಡುವೆ ಹೊಂದಾಣಿಕೆ ವಂಚನೆಯಿಂದ ನೂರಾರು ಕೋಟಿ ರೂ.ಗಳನ್ನು ಗುಳುಂ ಮಾಡಲಾಗಿದೆ.

ಬೆಂಗಳೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿರುವ 7,300 ಕೋಟಿ ರೂ.ಗಳ ಪೈಕಿ ರಸ್ತೆ ಅಭಿವೃದ್ಧಿಗೆ 2075 ಕೋಟಿ ರೂ.ಗಳನ್ನು ನೀಡಲಾಗಿದ್ದು, ಪೈತಾನ್ ಯಂತ್ರಗಳ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯದಲ್ಲಿ 15.20 ಕೋಟಿ ರೂ.ಗಳಷ್ಟು ಅಕ್ರಮ ನಡೆದಿದೆ ಎಂದು ಟಿವಿಸಿಸಿ ವರದಿ ತಿಳಿಸಿದೆ.ಪಿಡಬ್ಲ್ಯುಡಿ ಇಲಾಖೆ ವತಿಯಿಂದ ಪಾಲಿಕೆ ವ್ಯಾಪ್ತಿಯ 217.43 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಲು 227.74 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಇಷ್ಟೆಲ್ಲಾ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಹಣ ಖರ್ಚು ಮಾಡಿ ನಿರ್ಮಿಸಿರುವ ರಸ್ತೆಗಳು ಸಂಪೂರ್ಣ ಯಮಸ್ವರೂಪಿ ಗುಂಡಿಗಳಿಂದ ತುಂಬಿ ಹೋಗಿವೆ. ಐದಾರು ಕೋಟಿ ರೂ. ಖರ್ಚು ಮಾಡಿ ಹೊಸದಾಗಿ ಡಾಂಬರೀಕರಣ ಮಾಡಲಾಗಿದ್ದ ಡಾ.ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಯು ಕೇವಲ 2 ತಿಂಗಳೊಳಗೆ ಹಾಳಾಗಿದೆ.   ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಗುತ್ತಿಗೆದಾರರಿಂದ ನೇರವಾಗಿ ತಮ್ಮ ಪಾಲಿನ ಕಮೀಷನ್ ಪಡೆಯುವ ಸಲುವಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದ್ದಾರೆ. ಇದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ್ದಾರೆ. ಈ ಸಮಿತಿಯ ಮೂಲಕ ಬಿಬಿಎಂಪಿಯನ್ನು ಸೂಪರ್‍ಸೀಡ್ ಮಾಡಲಾಗಿದೆ ಎಂದು ರಮೇಶ್ ಗಂಭೀರ ಆರೋಪ ಮಾಡಿದರು.

ಅಧಿಕಾರಯುಕ್ತ ಸಮಿತಿ ರಚಿಸುವ ಮೂಲಕ ಪಾಲಿಕೆ ಸದಸ್ಯರು, ಸ್ಥಾಯಿಸಮಿತಿಗಳು, ಆಯುಕ್ತರು ಮತ್ತು ಪಾಲಿಕೆ ಸಭೆಯ ಎಲ್ಲಾ ಅಧಿಕಾರಗಳನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದರು. ಬೆಂಗಳೂರು ವಿಷನ್‍ಗ್ರೂಪ್, ಬೆಂಗಳೂರು ಮೆಟ್ರೋ ಪಾಲಿಟಿನ್ ಪ್ಲ್ಯಾನಿಂಗ್ ಕಮಿಟಿ ಎಂಬ ನಾಮಕಾವಸ್ಥೆ ಸಮಿತಿಗಳನ್ನು ರಚಿಸಿ ಕನ್ನಡೇತರ ಸಾಮ್ರಾಜ್ಯಶಾಹಿಗಳಿಗೆ ಅವಕಾಶ ನೀಡಲಾಗಿದೆ. ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ನಡೆಸಿರುವ ಅಪಾರ ಪ್ರಮಾಣದ ಭ್ರಷ್ಟಾಚಾರವನ್ನು ಕೇವಲ ಒಂದೇ ಒಂದು ಮಳೆ ಬಟಾಬಯಲು ಮಾಡಿವೆ.

ಕೆ.ಜೆ.ಜಾರ್ಜ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ ಅವರು ಬೆಂಗಳೂರು ನಾಗರಿಕರಿಗೆ ಗುಂಡಿಭಾಗ್ಯ ದಯಪಾಲಿಸಿದ್ದಾರೆ ಎಂದ ಅವರು, ಇದೇ ವೇಳೆ ಅವರು 400 ಪುಟಗಳಷ್ಟು ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

Facebook Comments

Sri Raghav

Admin