ಹುಲಿರಾಯನ ಮೋಷನ್ ಪೋಸ್ಟರ್  ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

7

ಅರವಿಂದ್ ಕೌಶಿಕ್ ನಿರ್ದೇಶನದ ಮೂರನೇ ಚಿತ್ರ ಹುಲಿರಾಯ ಮೋಷನ್ ಪೋಸ್ಟರ್  ಬಿಡುಗಡೆಯಾಗಿದೆ. ಈ ಹಿಂದಿನ ಚಿತ್ರಗಳಲ್ಲಿಯೇ ಭಿನ್ನವಾದ ಹಾದಿಗಳಲ್ಲಿ ಗಮನ ಸೆಳೆದಿದ್ದ ಅವರು ಈ ಚಿತ್ರವನ್ನೂ ಕೂಡಾ ಅದಕ್ಕಿಂತಲೂ ವಿಶೇಷವಾಗಿಯೇ ರೂಪಿಸಿದ್ದಾರೆಂಬ ಸೂಚನೆಗಳೂ ಕೂಡಾ ಸ್ಪಷ್ಟವಾಗಿಯೇ ಹೊರ ಬಿದ್ದಿವೆ.ಹುಲಿರಾಯ ಚಿತ್ರದ ವಿಶೇಷವಾದ ಮೋಷನ್ ಪೋಸ್ಟರ್ ಅನ್ನು ಹಿರಿಯ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್ ಅವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಇದೀಗ ನಾಯಕ ನಟನಾಗಿ ಬೇಡಿಕೆಯಲ್ಲಿರುವ ಅನೀಶ್ ತೇಜೇಶ್ವರ್ ಕೂಡ ಹಾಜರಿದ್ದು, ತಂಡಕ್ಕೆ ಶುಭ ಕೋರಿದರು. ಆ ನಂತರದಲ್ಲಿ ತೆರೆದುಕೊಂಡಿದ್ದ ಹುಲಿರಾಯ ಕಥೆ ಹುಟ್ಟಿದ ಬಗೆ ಮತ್ತು ಚಿತ್ರೀಕರಣದ ನಾನಾ ಮಜಲುಗಳು. ಏನಾದರೂ ಹೊಸತನ್ನು ಮಾಡಬೇಕೆಂಬ ಹಂಬಲ ಹೊಂದಿದ್ದ ಈ ಚಿತ್ರದ ನಾಯಕ ಬಾಲು ನಾಗೇಂದ್ರ ಮತ್ತು ಅರವಿಂದ ಕೌಶಿಕ್ ಸೇರಿಕೊಂಡು ಕಂಡ ಕನಸು ಹುಲಿರಾಯ.

ಅರವಿಂದ್ ಬಾಲು ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಚಿತ್ರದ ಕಥೆ ಮಾಡಿಕೊಂಡಿದ್ದರಂತೆ. ಆದರೆ ಚಿತ್ರವನ್ನು ಮಾಡೇ ಬಿಡುವ ನಿರ್ಧಾರಕ್ಕೆ ಬಂದರಾದರೂ ನಿರ್ಮಾಪಕರಿನ್ನೂ ಸಿಕ್ಕಿರಲಿಲ್ಲ. ಆಗ ಈ ಚಿತ್ರದ ಅಂತರಾಳ ಜಾಹೀರು ಮಾಡುವಂಥಾ ಒಂದು ಚೆಂದದ ಟೀಸರ್ ಸೃಷ್ಟಿಸಿದ ಈ ತಂಡ ಅದನ್ನಿಟ್ಟುಕೊಂಡು ನಿರ್ಮಾಪಕರ ತಲಾಷಿ ನಲ್ಲಿದ್ದಾಗ ಸಿಕ್ಕವರು ಕೆ.ಎನ್. ನಾಗೇಶ್.ಕೆ.ಎನ್ ನಾಗೇಶ್ ಅವರು ಈ ಹಿಂದೆ ಅರವಿಂದ್ ಕೌಶಿಕ್ ನಮ್ ಏರಿಯಾಲ್ ಒಂದಿನ ಚಿತ್ರ ಮಾಡುವ ಹೊತ್ತಿಂದಲೇ ಪರಿಚಿತರಾದವರು. ಚಿತ್ರ ನಿರ್ಮಾಣ ಮಾಡಲು ಒಪ್ಪಿದ ನಂತರ ಒಂದೇ ವೇಗದಲ್ಲಿ ಶುರುವಾದ ಹುಲಿರಾಯನ ಶೂಟಿಂಗ್ ಮುಕ್ತಾಯಗೊಂಡು ಚಿತ್ರ ಪೋಸ್ಟರ್  ಪ್ರೊಡಕ್ಷನ್ ಹಂತದಲ್ಲಿದೆ.ಅಂದಹಾಗೆ ನಿರ್ದೇಶಕ ಅರವಿಂದ್ ಕೌಶಿಕ್ ಅವರು ಹುಲಿರಾಯ ಕಥೆಯ ಸಣ್ಣ ಎಳೆಯನ್ನಷ್ಟೇ ಕುತೂಹಲಕರವಾಗಿ ಹೊರ ಬಿಟ್ಟಿದ್ದಾರೆ. ಹುಲಿ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಪ್ರಾಣಿ.

ಒಂದು ವೇಳೆ ಅದೇ ಹುಲಿ ಬೆಂಗಳೂರಿನಂಥಾ ಸಿಟಿಗೆ ಬರುವಂತಾದರೆ ಏನಾಗಬಹುದು, ಎಂತೆಂಥ ಅನಾಹುತ ಗಳಾದೀತೆಂಬ ಎಳೆಯೊಂದಿಗೆ ಬೆಂಗಳೂರಿನಂಥ ಮಹಾ ನಗರಿಗಳ ಜಂಜಾಟ, ಒತ್ತಡಗಳನ್ನು ಬೇರೆಯದ್ದೇ ರೀತಿಯಲ್ಲಿ ಹೇಳುವ ಭಿನ್ನ ಪ್ರಯತ್ನ ಈ ಚಿತ್ರದಲ್ಲಿದೆಯಂತೆ. ಈ ಭಿನ್ನವಾದ ಮೂವತೈದು ಸೆಕೆಂಡುಗಳ ಮೋಷನ್ ಪೋಸ್ಟರ್  ಮಾಡಿದವರು ಸಂತೋಷ್ ರಾಧಾಕೃಷ್ಣನ್. ಈ ಎಲ್ಲದರ ನಡುವೆ ಈಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್  ಪ್ರತಿಯೊಂದು ಪಾತ್ರಗಳ ಹೊಳಹನ್ನೂ ನೀಡುತ್ತಲೇ ಕುತೂಹಲ ಹುಟ್ಟಿಸುವಲ್ಲಿ ಚಿತ್ರತಂಡ ಯಶ ಕಂಡಿದೆ ಎನ್ನಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin