ಹುಳಿಯಾರಿನಲ್ಲಿ ಭೂಕಂಪದ ನಂತರ ಪಾಳು ಬಾವಿಯಲ್ಲಿ ಬಂತು ನೀರು…!

ಈ ಸುದ್ದಿಯನ್ನು ಶೇರ್ ಮಾಡಿ

HUliyaru-Water

ಹುಳಿಯಾರು, ಏ.6- ಹಿಂದೆಂದೂ ಕಾಣದಂತಹ ಭೀಕರ ಬರಗಾಲ ರಾಜ್ಯವನ್ನು ಆವರಿಸಿದ್ದು, ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಒಂದು ರೀತಿಯಲ್ಲಿ ಸಂಭವಿಸಿದ ಭೂಕಂಪ ಹುಳಿಯಾರಿಗೆ ವರದಾನವಾಗಿದೆ ಎಂದರೆ ತಪ್ಪಾಗಲಾರದು.
ಪಾಳು ಬಾವಿಯಲ್ಲಿ ಇದ್ದಕ್ಕಿದ್ದ ಹಾಗೆ ಈ ಬೇಸಿಗೆಯಲ್ಲಿ ನೀರು ಉಕ್ಕುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ಹೋಬಳಿಯ ಎಚ್.ಮೇಲನಹಳ್ಳಿಯಲ್ಲಿ ಕಾಣಿಸಿಕೊಂಡಿದೆ.

ಪಾಳು ಬಾವಿಯಲ್ಲಿ ನೀರು ಉಕ್ಕಲು ಭೂಕಂಪ ಕಾರಣ ಎನ್ನಲಾಗುತ್ತಿದ್ದು ಇತ್ತೀಚೆಗೆ ಹುಳಿಯಾರು ಹೋಬಳಿಯಾದ್ಯಂತ ಆಗಿದ್ದ ಲಘು ಭೂಕಂಪ ಈ ಗ್ರಾಮದಲ್ಲೂ ಸಹ ಸಂಭವಿಸಿತ್ತು. ಈ ಕಂಪನದಿಂದ ನೀರಿನ ಒರತೆ ಜಿನುಗಲು ಕಾರಣ ಎನ್ನುವ ಅಭಿಪ್ರಾಯವನ್ನು ಗ್ರಾಮಸ್ಥರು ತಾಳಿದ್ದಾರೆ.   ಭಾನುವಾರ ಭೂಕಂಪ ಸಂಭವಿಸಿದ್ದು, ಇದ್ದಕ್ಕಿದ್ದಂತೆ ಮೇಲನಹಳ್ಳಿ ಬಾವಿಯಲ್ಲಿ ನೀರು ಜಿನುಗಲಾರಂಭಿಸಿದೆ. ನಂತರ ನೀರಿನ ಸೆಲೆ ಹೆಚ್ಚಾಗಿ ಈಗ ಬರೋಬ್ಬರಿ 4 ಅಡಿ ನೀರು ಕಾಣಿಸಿಕೊಂಡಿದೆ. ಇದರಿಂದ ಹರ್ಷಚಿತ್ತರಾದ ಗ್ರಾಮದ ಕನ್ನಡ ಸಂಘದ ಪದಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಪಾಳು ಬಾವಿಯಲ್ಲಿ ಬಿದ್ದಿದ್ದ ಕಸಕಡ್ಡಿಗಳನ್ನು ತೆಗೆದು ಸ್ವಚ್ಚಗೊಳಿಸಿದ್ದಾರೆ.

ಊರಿನ ಮಜ್ಜನಬಾವಿ ಎಂದು ಕರೆಯಲ್ಪಡುವ ಈ ಬಾವಿ ಎರಡು ವರ್ಷಗಳ ಹಿಂದೆ ಬತ್ತಿ ಹೋಗಿತ್ತು. ಬಾವಿಯಲ್ಲಿ ನೀರು ಇರುವವರೆವಿಗೂ ಇಡೀ ಗ್ರಾಮದ ನೀರಿನ ಆಸರೆಯಾಗಿತ್ತು. ಅಲ್ಲದೆ ಇಲ್ಲಿನ ಆಂಜನೇಯಸ್ವಾಮಿ ಹಾಗೂ ಕಪ್ಪಗೆರೆಯಮ್ಮ ದೇವರುಗಳ ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ಈ ಬಾವಿ ನೀರು ಬಳಸಲಾಗಿತ್ತು. ಜೊತೆಗೆ ಊರಿನ ಹೆಣ್ಣುಮಕ್ಕಳು ಗಂಗಮ್ಮನನ್ನು ಸಹ ಇದೇ ಬಾವಿಯಲ್ಲಿ ಮಾಡುತ್ತಿದ್ದರು.  ಭೂಕಂಪನದಿಂದ ಭೂಮಿಯ ಕಲ್ಲಿನ ಪದರಗಳು ಚಲನೆಗೊಳಪಡುತ್ತವೆ. ಯಾವುದೋ ಒಂದು ಪದರದಲ್ಲಿ ಶೇಖರಣೆಯಾಗಿದ್ದ ನೀರು ನಿಧಾನವಾಗಿ ಹರಿಯುತ್ತದೆ. ಅದೇ ಮಾರ್ಗದಲ್ಲಿ ಭಾವಿಗಳು ಅಥವಾ ಇನ್ನಿತರ ಜಲಮೂಲಗಳು ಇದ್ದರೆ ಅಲ್ಲಿ ಶೇಖರಣೆಯಾಗುತ್ತದೆ. ಕೆಲವು ಸಲ ಭೂಮಿಯ ಲಘು ಕಂಪನದಿಂದ ಅನುಕೂಲವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಜಿಲ್ಲಾ ವಿಜ್ಞಾನ ಕೇಂದ್ರದ ಅóಧ್ಯಕ್ಷ ರಾಮಕೃಷ್ಣಪ್ಪ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin