ಹುಷಾರ್…ಪಟಾಕಿಗಳಿಂದ ಕುಸಿಯಬಹುದು ನಿಮ್ಮ ಕಟ್ಟಡ..!

ಈ ಸುದ್ದಿಯನ್ನು ಶೇರ್ ಮಾಡಿ

Crackers 02

ಬೆಂಗಳೂರು, ಅ.17- ಬೆಳಕಿನ ಹಬ್ಬ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿರುವಂತೆ ಈ ಬಾರಿ ಭಾರೀ ಸದ್ದು ಮಾಡುವ ಪಟಾಕಿಯಿಂದ ಸಾರ್ವಜನಿಕರು ದೂರ ಇರುವುದೇ ಒಳಿತು. ಏಕೆಂದರೆ ಕಳೆದ ಎರಡು ತಿಂಗಳಿನಿಂದ ಉದ್ಯಾನನಗರಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅನೇಕ ಸಾವುನೋವುಗಳು ಸಂಭವಿಸಿವೆ. ಇದರ ಜೊತೆಗೆ ಭಾರೀ ಸದ್ದು ಮಾಡುವ ಪಟಾಕಿಗಳಿಂದ ಕಟ್ಟಡಗಳು ಕುಸಿಯುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ.

ಹೀಗಾಗಿ ಸಾರ್ವಜನಿಕರು ಪ್ರತಿವರ್ಷದಂತೆ ಧಾಮ್ ಧೂಮ್ ಎನ್ನುವ ಪಟಾಕಿ ಹೊಡೆಯದೆ ಸರಳವಾಗಿ ಹಬ್ಬ ಆಚರಿಸುವುದು ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು. ಉದ್ಯಾನನಗರಿಯ ಈಜಿಪುರದಲ್ಲಿ ನಿನ್ನೆ ಬೆಳಗ್ಗೆ ಹಳೆ ಕಟ್ಟಡವೊಂದು ಕುಸಿದು ಏಳು ಮಂದಿ ದುರಂತ ಸಾವಿಗೀಡಾದ ಘಟನೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಈಗ ಹೊಸ ಆತಂಕ ಎದುರಾಗಿದೆ.  ಈ ನಡುವೆ ಇಂದು ಬೆಳಗ್ಗೆ ಯಶವಂತಪುರ ಸಮೀಪ ಮತ್ತೊಂದು ಕಟ್ಟಡ ಕುಸಿದಿದೆ. ತಜ್ಞರ ಪ್ರಕಾರ ಭಾರೀ ಮಳೆಗೆ ಕಟ್ಟಡಗಳು ಕುಸಿದು ಬೀಳುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.

ಭಾರೀ ಶಬ್ಧ ಮಾಡುವ ಪಟಾಕಿಗಳು ಮತ್ತು ಸಿಡಿಮದ್ದುಗಳನ್ನು ಬಳಸದಂತೆ ಬಿಬಿಎಂಪಿ ಬೆಂಗಳೂರು ನಾಗರಿಕರಲ್ಲಿ ಮನವಿ ಮಾಡಿದೆ. ರಾಜಧಾನಿ ದೆಹಲಿಯಲ್ಲಿ ಪಟಾಕಿಗಳನ್ನು ನಿರ್ಬಂಧಿಸಿ ಸುಪ್ರೀಂಕೋರ್ಟ್ ಹೊರಡಿಸಿದ ಮಹತ್ವದ ಆದೇಶ ಪಾಲಿಕೆಯ ಈ ಮನವಿಗೆ ಕಾರಣವಲ್ಲ..! ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈಗಾಗಲೇ ಶಿಥಿಲಗೊಂಡಿರುವ ಕಟ್ಟಡಗಳು ದೀಪಾವಳಿಯ ಮೂರು ದಿನಗಳ ಪಟಾಕಿಗಳ ಹಾವಳಿಯನ್ನು ತಡೆದುಕೊಳ್ಳುವ ಸಾಮಥ್ರ್ಯ ಹೊಂದಿಲ್ಲ ಎಂಬುದು ಬಿಬಿಎಂಪಿ ಸಿಬ್ಬಂದಿ ಆತಂಕಕ್ಕೆ ಕಾರಣವಾಗಿದೆ.
ಈಜಿಪುರದಲ್ಲಿ ನಿನ್ನೆ ಸಿಲಿಂಡರ್ ಸ್ಫೋಟದಿಂದ ಹಳೆ ಕಟ್ಟಡ ಕುಸಿದು ಸಾವು-ನೋವು ಸಂಭವಿಸಿದ ಬೆನ್ನಲ್ಲೇ ದೀಪಾವಳಿ ವೇಳೆ ಸತತವಾಗಿ ಸಿಡಿಸಲಾಗುವ ಭಾರೀ ಶಬ್ಧದ ಪಟಾಕಿಗಳು, ಸಿಡಿಮದ್ದುಗಳು ಮತ್ತು ಬಾಣಬಿರುಸುಗಳು ನಗರದ ಹಳೆ ಕಟ್ಟಡಗಳನ್ನು ಉರುಳಿಸುವ ಸಾಧ್ಯತೆ ಇದ್ದು, ಅಧಿಕಾರಿಗಳು ಚಿಂತಾಕ್ರಾಂತರಾಗಿದ್ದಾರೆ.  ಮೊದಲೇ ಹಳೆಯದಾದ ಕಟ್ಟಡವು ಕಳೆದ ಕೆಲವು ದಿನಗಳ ನಿರಂತರ ವರ್ಷಧಾರೆಯಿಂದ ಸಾಕಷ್ಟು ತೇವಾಂಶವನ್ನು ಹೀರಿಕೊಂಡು ಮತ್ತಷ್ಟು ದುರ್ಬಲವಾಗಿರುತ್ತದೆ. ಇದೇ ಸಂದರ್ಭದಲ್ಲಿ ಭಾರೀ ಶಬ್ಧದ ಸ್ಫೋಟಗಳು (ಪಟಾಕಿಗಳಿಂದ) ಸಂಭವಿಸಿದರೆ ಗೋಡೆಗಳು ಅಥವಾ ಕಟ್ಟಡಗಳು ಉರುಳಿ ದುರಂತಗಳು ಸಂಭವಿಸಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳುವಂತೆ ನಗರದಲ್ಲಿ ಕಳೆದ ಎರಡು ತಿಂಗಳಿನಿಂದ ಮಳೆ ಸುರಿಯುತ್ತಿದೆ. ಮಣ್ಣಿನಲ್ಲಿ ಆದ್ರ್ರತೆ (ತೇವಾಂಶ) ಪ್ರಮಾಣ ತೀವ್ರ ಹೆಚ್ಚಾಗಿದೆ. ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ನೀರು ನಿಲುಗಡೆಯಾಗಿದ್ದರಿಂದ ಹಲವಾರು ಕಟ್ಟಡಗಳ ಗೋಡೆಗಳು ನೀರನ್ನು ಹೀರಿಕೊಂಡಿರುತ್ತವೆ. ಇಂಥ ಸಂದರ್ಭದಲ್ಲಿ ಅಧಿಕ ಡೆಸಿಬಲ್ (ಶಬ್ಧಮಾಪನ) ಪಟಾಕಿಗಳು ಮತ್ತು ಸಿಡಿಮದ್ದುಗಳನ್ನು ಸಿಡಿಸಿದಾಗ ಅದು ಕಂಪನಕ್ಕೆ ಒಳಗಾಗಿ ಮತ್ತಷ್ಟು ದುರ್ಬಲಗೊಂಡು ಉರುಳಬಹುದು. ಆದಕಾರಣ, ಈ ದೀಪಾವಳಿಯಲ್ಲಿ ಅಧಿಕ ಶಬ್ಧ ಹೊರಹೊಮ್ಮಿಸುವ ಪಟಾಕಿಗಳನ್ನು ಬಳಸಬೇಡಿ ಎಂದು ಬೆಂಗಳೂರು ಜನತೆಗೆ ಮನವಿ ಮಾಡಿದ್ದಾರೆ.

ಭಾರಿ ಶಬ್ಧದ ಪಟಾಕಿಗಳು ಅಗಾಧ ಪ್ರಮಾಣದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಅಧಿಕ ಡೆಸಿಬೆಲ್ ಸಿಡಿಮದ್ದುಗಳು ಸ್ಫೋಟಗೊಂಡಾಗ ಅದರೊಳಗಿನ ಒತ್ತಡ ಮತ್ತು ಉಷ್ಣತೆಯು ಸ್ಫೋಟ ಅಲೆಗಳನ್ನು ಸೃಷ್ಟಿಸುತ್ತವೆ. ಇಂಥ ತರಂಗಗಳನ್ನು ಪ್ರೀಢ್‍ಲ್ಯಾಂಡರ್ ವೇವ್ ಎನ್ನುವರು. ಇದು ಸುತ್ತಮುತ್ತಲಿನ ಕಟ್ಟಡಗಳು ಕಂಪಿಸುವಂತೆ ಮಾಡುತ್ತವೆ. ಇದರಿಂದ ಅವುಗಳಿಗೆ ಹಾನಿಯಾಗುತ್ತದೆ. ಪಟಾಕಿಗಳ ಭಾರೀ ಶಬ್ಧಗಳು ಪುನರಾವರ್ತಿತವಾದಷ್ಟೂ ಕಟ್ಟಡಗಳು ದುರ್ಬಲವಾಗುತ್ತವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.  ಈ ಗಂಭೀರ ಸನ್ನಿವೇಶವನ್ನು ಪರಿಗಣನೆಗೆ ತೆಗೆದುಕೊಂಡು, ಭಾರೀ ಶಬ್ಧಗಳ ಪಟಾಕಿಗಳನ್ನು ಸಿಡಿಸದೇ ಸರಳವಾಗಿ ದೀಪಾವಳಿ ಆಚರಿಸಿ ಎಂದು ಪಾಲಿಕೆ ನಾಗರಿಕರಲ್ಲಿ ಮನವಿ ಮಾಡಿದೆ.

Facebook Comments

Sri Raghav

Admin