ಹುಷಾರ್ ಯಡಿಯೂರಪ್ಪ…! ಈಶ್ವರಪ್ಪ ನೇರ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Brigade--01

ಬೆಂಗಳೂರು,ಏ.27-ಇನ್ನು ಮುಂದೆ ಪಕ್ಷ ಉಳಿಯಬೇಕೆಂದರೆ ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ನಡೆಯಲು ಅವಕಾಶ ಕೊಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ನೇರವಾಗಿಯೇ ಸವಾಲು ಹಾಕಿದ್ದಾರೆ.  ಅರಮನೆ ಮೈದಾನದಲ್ಲಿ ನಡೆದ ಸಂಘಟನೆ ಉಳಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಇನ್ನು ಏಕಪಕ್ಷೀಯ ನಿರ್ಧಾರಗಳಾಗಲಿ ಸರ್ವಾಧಿಕಾರಿ ಧೋರಣೆಗೆ ಅವಕಾಶ ನೀಡುವುದಿಲ್ಲ. ಬಿಜೆಪಿ ಉಳಿಸಲು ನಾವು ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಗುಡುಗಿದರು. 

ನಾವು ಅಪ್ಪ ಅಮ್ಮನಿಗೆ ಹುಟ್ಟಿದವರು, ಯಾವ ಕಾರಣಕ್ಕೂ ನಾವು ಪಕ್ಷ ಬಿಡುವುದಿಲ್ಲ. ಬೇರೆ ಪಕ್ಷವನ್ನು ಸೇರುವುದಿಲ್ಲ. ಹೊಸ ಪಕ್ಷ ಕಟ್ಟುವ ಮಾತು ನಮ್ಮ ಕನಸಿನಲ್ಲೂ ಇಲ್ಲ. ನಮ್ಮ ರಕ್ತದ ಕಣ ಕಣದಲ್ಲಿರುವುದು ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಿದ್ಧಾಂತ. ನಮ್ಮ ಪಕ್ಷ ನಿಷ್ಠೆಯನ್ನು ಯಾರೊಬ್ಬರು ಪ್ರಶ್ನಿಸುವಂತಿಲ್ಲ ಎಂದು ಎಚ್ಚರಿಸಿದರು.   ನಮ್ಮ ತಾಯಿಯ ಮೇಲೆ ಪ್ರಮಾಣ ನಾವೆಂದೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಲ್ಲ. ಯಾರು ನಡೆಸುತ್ತಿದ್ದಾರೆ ಎಂಬುದು ಕಾರ್ಯಕರ್ತರಿಗೆ ತಿಳಿದಿದೆ. ಕೆಜೆಪಿ ಕಟ್ಟಬೇಡಿ ಕಟ್ಟಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಪಕ್ಷ ಕಟ್ಟಿದ್ರಿ. ಇದರಿಂದ ಬಿಜೆಪಿಗೆ ಸೋಲಾಗಿ ಸಿದ್ದರಾಮಯ್ಯನವರಿಗೆ ಲಾಟರಿ ಹೊಡೆಯಿತು ಎಂದರು.

ಬಿಜೆಪಿಯನ್ನು ನಿಷ್ಠಾವಂತರು ಕಟ್ಟಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಬೆವರು ಸುರಿಸಿ ಶ್ರಮವಹಿಸಿದ್ದರಿಂದ ಇಷ್ಟು ದೊಡ್ಡ ಪಕ್ಷವಾಗಿ ಬೆಳೆದಿದೆ. ಮುಂದೆಯೂ ನಿಷ್ಠಾವಂತ ಕಾರ್ಯಕರ್ತರು ಬರಬೇಕೆಂಬುದು ನಮ್ಮ ಆಸೆ. ನಿಮ್ಮ ಹಿಂದೆ ಮುಂದೆ ಇರುವವರು ಇಂದ್ರ,ಚಂದ್ರ ಎಂದು ತಿಳಿದುಕೊಂಡಿದ್ದೀರಿ. ನಾವು ಚರ್ಚೆಗೆ ಸಿದ್ದ ಎಂದು ಹೇಳಿದರೂ ನೀವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.   ಪದಾಧಿಕಾರಿಗಳ ಪಟ್ಟಿ ಬದಲಾಯಿಸಬೇಕೆಂದು ವರಿಷ್ಠರು ಸೂಚನೆ ಕೊಟ್ಟರೂ ನಾಮಕಾವಸ್ತೆಗೆ ಒಂದೆರಡು ಬದಲಾಯಿಸಿ ಸುಮ್ಮನಾದಿರಿ. ನಿಮಗೆ ಜಯಕಾರ ಹಾಕುವವರನ್ನು ಪದಾಧಿಕಾರಿಗಳ ಪಟ್ಟಿಯಲ್ಲಿ ನೇಮಕ ಮಾಡಿದಿರಿ. ವಿರೋಧಿಸಿದವರನ್ನು ಮೂಲೆಗುಂಪು ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಸೊಗಡು ಶಿವಣ್ಣ , ನಂದೀಶ್ ಏನು ತಪ್ಪು ಮಾಡಿದ್ದರೆಂದು ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೀರಿ, ಕೆಜಿಪಿಯಿಂದ ಬಂದವರನ್ನು ಜಿಲ್ಲಾಧ್ಯಕ್ಷರು , ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿದ್ದೀರಿ. ಮುಂದೆ ಸರ್ಕಾರ ಬಂದರೆ ಅವರನ್ನು ಮಂತ್ರಿಯೂ ಮಾಡುತ್ತೀರಿ. ಹಾಗಾದರೆ ಪಕ್ಷ ನಿಷ್ಠರು ಎಲ್ಲಿಗೆ ಹೋಗಬೇಕೆಂದು ಹರಿಹಾಯ್ದರು.   ನಿಮ್ಮನ್ನು ಈ ಹಿಂದೆ ಜೈ ಜೈ ಎನ್ನುತ್ತಿದ್ದವರೇ ಏನು ಮಾಡಿದ್ದಾರೆ ಎಂಬುದು ಗೊತ್ತಿರಲಿ. ಮುಂದೆಯೂ ಇವರೇ ಮಣ್ಣು ಮುಕ್ಕಿಸುತ್ತಾರೆ ಎಂಬುದರಲ್ಲಿ ಅನುಮಾನಬೇಡ. ಈಗಲೂ ಹೇಳುತ್ತೇವೆ ನಾವ್ಯಾರು ಪಕ್ಷ ವಿರೋಧಿಗಳಲ್ಲ. ಹೈಕಮಾಂಡ್ ನಮ್ಮ ವಿರುದ್ದ ಶಿಸ್ತು ಕ್ರಮ ಜರುಗಿಸಿದರೂ ಚಿಂತೆ ಇಲ್ಲ. ಆದರೆ ಪಕ್ಷದೊಳಗೆ ನಡೆಯುತ್ತಿರುವ ಚಟುವಟಿಕೆಗಳು ಸರಿಯಾಗಬೇಕು, ಯಡಿಯೂರಪ್ಪ ಬೆಂಬಲಿಗರಿಗೆ ಕಡಿವಾಣ ಹಾಕದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin