ಹುಸಿಯಾದ ತಜ್ಞರ ಮುನ್ಸೂಚನೆ, ಮುಂಗಾರು ಮತ್ತಷ್ಟು ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

Weather--001

ಬೆಂಗಳೂರು, ಜೂ.5– ಅವಧಿಗೂ ಮುನ್ನ ಮುಂಗಾರು ಮಳೆ ಆರಂಭವಾಗಲಿದೆ ಎಂಬ ಹವಾಮಾನ ತಜ್ಞರ ಮುನ್ಸೂಚನೆ ಹುಸಿಯಾಗಿದೆ. ವಾಡಿಕೆಗಿಂತ ತಡವಾಗಿ ಮುಂಗಾರು ಮಳೆ ಆಗಮಿಸುವ ಲಕ್ಷಣಗಳು ಗೋಚರಿಸುತ್ತಿವೆ.   ಮೇ ತಿಂಗಳಿನಲ್ಲಿ ಬಿದ್ದ ಪೂರ್ವ ಮುಂಗಾರು ಮಳೆ ರೈತ ಸಮುದಾಯದಲ್ಲಿ ಹರ್ಷವನ್ನುಂಟು ಮಾಡಿತ್ತು. ಅದೇ ವೇಳೆಗೆ ಹವಾಮಾನ ತಜ್ಞರು ಕನಿಷ್ಠ ನಾಲೈದು ದಿನ ಮುಂಚಿತವಾಗಿ ಮುಂಗಾರು ಆರಂಭವಾಗಲಿದೆ ಎಂದು ಹೇಳಿದ್ದರು. ಆದರೆ, ಕಳೆದ ಐದು ದಿನಗಳಿಂದ ಗಾಳಿ ಮತ್ತು ಮೋಡ ಕಂಡು ಬರುತ್ತಿದೆಯೇ ಹೊರತು ಮಳೆ ಮಾತ್ರ ಬೀಳುತ್ತಿಲ್ಲ.ಹೀಗಾಗಿ ಮತ್ತೆ ರೈತ ಸಮುದಾಯ ಚಿಂತೆಗೀಡಾಗಿದೆ. ಜೂನ್ 9ರ ವೇಳೆಗೆ ಮುಂಗಾರು ಆಗಮನವಾಗುವ ನಿರೀಕ್ಷೆ ಇದೆ. ಆದರೂ ಭಾಗಶಃ ವ್ಯಾಪಕ ಮಳೆ ಬರಲಿದೆಯೇ ಹೊರತು ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು. ಈ ಬಾರಿಯ ಮುಂಗಾರು ಆರಂಭದಲ್ಲಿಯೇ ದುರ್ಬಲಗೊಂಡಿದೆ. ಹೀಗಾಗಿ ಮಳೆ ಪ್ರಮಾಣ ಕಡಿಮೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಅವರ ಪ್ರಕಾರ ಅರಬ್ಬಿಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಮುಂಗಾರು ಮಳೆಯಲ್ಲಿ ವ್ಯತ್ಯಾಸ ಉಂಟಾಗಿದೆ. ವಾಯುಭಾರ ಕುಸಿತ ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದು, ಅದು ದುಬರ್ಲಗೊಳ್ಳುವವರೆಗೂ ಮುಂಗಾರು ಪ್ರಬಲಗೊಳ್ಳುವುದಿಲ್ಲ. ನಾಳೆ ಸಂಜೆ ವೇಳೆಗೆ ಮುಂಗಾರು ಚುರುಕುಗೊಂಡು ಜೂ.7ರಿಂದ 10ರವರೆಗೆ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದರು.


ಬಂಗಾಳಕೊಲ್ಲಿಯಲ್ಲೂ ಮತ್ತೊಂದು ವಾಯುಭಾರ ಕುಸಿತ ಉಂಟಾಗುತ್ತಿದ್ದು, ಅದು ಮುಂಗಾರು ಮಳೆಗೆ ಪೂರಕವಾಗಲಿದೆ ಎಂಬ ನಿರೀಕ್ಷೆ ಇದೆ. ಹೀಗಾಗಿ ಜೂ.7ರಿಂದ ಒಂದು ವಾರದೊಳಗೆ ಇಡೀ ರಾಜ್ಯಾದ್ಯಂತ ಮುಂಗಾರು ಮಳೆ ವ್ಯಾಪಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.  ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವದಿಂದ ಮುಂಗಾರು ಮಾರುತಗಳಲ್ಲಿ ವ್ಯತ್ಯಾಸ ಉಂಟಾಗಿ ಅವಧಿಗೂ ಮುನ್ನ ಬರಬೇಕಾಗಿದ್ದ ಮುಂಗಾರು ವಿಳಂಬವಾಗಿದೆ.

ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದು, ಒಳನಾಡಿಗೆ ಮಳೆ ಬಂದಿಲ್ಲ. ಹೀಗಾಗಿ ಈ ಬಾರಿಯ ಮುಂಗಾರು ವಾಡಿಕೆಗಿಂತ ಎರಡು-ಮೂರು ದಿನ ತಡವಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin