ಹೆಂಡತಿ-ಮಗುವನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿ ಕೋಮಾ ತಲುಪಿದ ಗಂಡ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru-Murder-Suicide
ಮೈಸೂರು, ಮೇ 25-ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಟೆಕ್ಕಿಯೊಬ್ಬ ಪತ್ನಿ ಹಾಗೂ ಮಗಳನ್ನು ಭೀಕರವಾಗಿ ಕೊಲೆಗೈದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿ ಕೋಮಾಕ್ಕೆ ತಲುಪಿರುವ ಹೃದಯ ವಿದ್ರಾವಕ ಘಟನೆಯಿಂದ ಸಾಂಸ್ಕøತಿಕ ನಗರಿ ಮೈಸೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ವಿಜಯನಗರದ 4ನೆ ಹಂತದಲ್ಲಿ ವಾಸವಾಗಿದ್ದ ಸವಿತಾ (39), ಮಗಳು ಸಿಂಚನಾ (11) ಭೀಕರವಾಗಿ ಕೊಲೆಯಾದ ದುರ್ದೈವಿಗಳು.  ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಪ್ರಜ್ವಲ್ (45) ಹಾಗೂ ಪತ್ನಿ ಸವಿತಾ ಒಂದೇ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಒಂದು ವರ್ಷದ ಹಿಂದೆಯಷ್ಟೆ ಪ್ರಜ್ವಲ್ ಕೆಲಸ ತ್ಯಜಿಸಿ ಸ್ವಂತ ಬಿಜಿನೆಸ್ ಮಾಡುವುದಾಗಿ ಹೇಳಿಕೊಂಡಿದ್ದರು. ಆದರೆ, ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ ಎನ್ನಲಾಗಿದೆ.

ಇದೇ ವಿಚಾರವಾಗಿ ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ.  ಎರಡು ದಿನಗಳ ಹಿಂದೆ ಪತ್ನಿ ಹಾಗೂ ಮಗಳು ನಿದ್ರೆಗೆ ಜಾರಿದ್ದಾಗ ಈತ ಇಬ್ಬರ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿ ಎರಡು ದಿನಗಳಿಂದ ಶವಗಳ ಮಧ್ಯೆಯೇ ಕಾಲ ಕಳೆದಿದ್ದಾರೆ.

ತಡರಾತ್ರಿ ಪ್ರಜ್ವಲ್ ತನ್ನ ತಂದೆಗೆ ದೂರವಾಣಿ ಕರೆ ಮಾಡಿ ಪತ್ನಿ ಹಾಗೂ ಮಗಳನ್ನು ನಾನು ಎರಡು ದಿನಗಳ ಹಿಂದೆಯೇ ಕೊಲೆ ಮಾಡಿದ್ದು, ಈಗ ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ದೂರವಾಣಿ ಸ್ಥಗಿತಗೊಳಿಸಿದ್ದಾರೆ.  ಇದರಿಂದ ಗಾಬರಿಯಾದ ತಂದೆ ಮನೆ ಬಳಿ ಇಂದು ಮುಂಜಾನೆ ಬಂದಾಗ ಪ್ರಜ್ವಲ್ ಕತ್ತು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ತಕ್ಷಣ ನೆರೆಹೊರೆಯವರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ಪ್ರಜ್ವಲ್ ಅವರು ಕೋಮಾ ಸ್ಥಿತಿಯಲ್ಲಿದ್ದಾರೆಂದು ಹೇಳಿ ಚಿಕಿತ್ಸೆ ಮುಂದುವರಿಸಿದ್ದಾರೆ.  ಸುದ್ದಿ ತಿಳಿದ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತಾಯಿ-ಮಗಳ ಮೃತ ದೇಹಗಳನ್ನು ಮೈಸೂರು ಮೆಡಿಕಲ್ ಕಾಲೇಜು ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin