ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪೊಲೀಸರು, ವಕೀಲರಿಗೆ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

healmet

ನಂಜನಗೂಡು, ಅ.6-ಇಲ್ಲಿನ ಸಂಚಾರಿ ಪೊಲೀಸರು ಕೇವಲ ಎರಡು ದಿನದಲ್ಲೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪೊಲೀಸರು ಮತ್ತು ವಕೀಲರು ಸೇರಿದಂತೆ 500ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಿ 50ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.ಕಳೆದ 15 ದಿನಗಳಿಂದ ಸಂಚಾರಿ ಪೊಲೀಸ್ ಠಾಣೆಯ ಎಸ್.ಐ.ಆನಂದ್ ತಮ್ಮ ಸಿಬ್ಬಂದಿಯೊಂದಿಗೆ ಹೆಲ್ಮೆಟ್ ಧರಿಸುವುದರ ಅನುಕೂಲತೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಅಕ್ಟೋಬರ್ 2 ರಿಂದ ದ್ವಿಚಕ್ರ ವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ತಾಕೀತು ಮಾಡಿದ್ದು ತಪ್ಪಿದ್ದರೆ ದಂಡ ಪಾವತಿ ಮಾಡಬೇಕೆಂದು ಎಚ್ಚರಿಕೆಯನ್ನು ನೀಡಲಾಗಿತ್ತು.ನಂಜನಗೂಡು ಠಾಣೆಗೆ ಬಂದ ನೂತನ ಎಸ್.ಐ.ಆನಂದರವರು ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರದ 12ಸ್ಥಳಗಳಲ್ಲಿ ಆಟೋ ದರದ ಪಟ್ಟಿಯ ಬೋರ್ಡನ್ನು ಅಳವಡಿಸಿರುವುದಲ್ಲದೇ ರಾಷ್ಟ್ರೀಯ ಹೆದ್ದಾರಿ 212ರ ಚಾಮಲಾಪುರದಹುಂಡಿ ಅಪೋಲೋ  ವೃತ್ತದಲ್ಲಿ ಮತ್ತು ನಗರದ ಹೃದಯ ಭಾಗವಾದ ಹುಲ್ಲಹಳ್ಳಿ ವೃತ್ತ, ವಿದ್ಯಾನಗರ ವೃತ್ತ ಮತ್ತು ನಗರಸಭೆಯ ವೃತ್ತದಲ್ಲಿ ಪೊಲೀಸ್ ಚೌಕಿ ಮತ್ತು ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಅಲ್ಲದೆ ಇತ್ತೀಚಿಗೆ ಅಪಘಾತಗಳು ಮತ್ತು ಸರಗಳ್ಳತನ ಆಗದಂತೆ ಎಚ್ಚರ ವಹಿಸಿದ್ದು, ನಾಕಬಂದಿ ಮಾಡುವ ಮೂಲಕ ಎಲ್ಲೆಡೆ, ಪೊಲೀಸ್ ಕಣ್ಗಾವಲು ಹಾಕಲಾಗಿದೆ.ರಸ್ತೆಯ ಬದಿ ಅಂಗಡಿಗಳ ತೆರವು: ನಗರಕ್ಕೆ ಪ್ರವೇಶಿಸುತ್ತಿದ್ದಂತೆಯೆ ಇಲ್ಲಿನ ಅಪೋಲೋ ವೃತ್ತದಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆಯುಂಟುಮಾಡಿದ್ದ ರಸ್ತೆಬದಿಯಲ್ಲಿರುವ ಅಂಗಡಿಗಳನ್ನು ಎತ್ತಂಗಡಿ ಮಾಡಿ ಅವರಿಗೆ ಒಂದೆ ರಸ್ತೆ ಬದಿ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಲಾಗಿದೆ.ಪ್ರಯಾಣಿಕರ ಅನುಕೂಲಕ್ಕಾಗಿ ಬಿ.ಡಿ.ಓ.ಕಛೇರಿ ಕಾಂಪೌಂಡ್ ಪಕ್ಕದಲ್ಲಿ ಆಟೋ ಸ್ಟ್ಯಾಂಡ್ ನಿರ್ಮಿಸಿ ಆಟೋದವರಿಗೆ ಶಿಸ್ತಿನಿಂದಿರಲು ಆದೇಶಿಸಲಾಗಿದೆ.

 

 

► Follow us on –  Facebook / Twitter  / Google+

 

 

Facebook Comments

Sri Raghav

Admin