ಹೆಸ್ಕಾಂ ಇಲಾಖೆ ವಿರುದ್ಧ ಅಶ್ವಕ್ಕೆ ಕಂದೀಲು ಕಟ್ಟಿ ಪತ್ರಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

MUDDEBIHALA

ಮುದ್ದೇಬಿಹಾಳ,ಏ.21- ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಹೈಮಾಸ್ಟ್ ದೀಪ ಕಳೆದ ಕೆಲವು ತಿಂಗಳಿನಿಂದ ಬೆಳಗದ ಹಿನ್ನೆಲೆಯಲ್ಲಿ ಬಸವ ಸಮಿತಿ ಸದಸ್ಯರು ಅಶ್ವಾರೂಢ ಬಸವೇಶ್ವರ ಮೂರ್ತಿ ಅಶ್ವದ ಲಗಾಮಿಗೆ ಕಂದೀಲು ಕಟ್ಟಿ ಪುರಸಭೆ ಹಾಗೂ ಹೆಸ್ಕಾಂ ಇಲಾಖೆಯ ವಿರುದ್ಧ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಿತ್ಯ ಸಾವಿರಾರು ವಾಹನಗಳ ಓಡಾಟವಿರುತ್ತದೆ. ರಾತ್ರಿಯಾದರೆ ಸಾಕು ಕತ್ತಲು ಆವರಿಸಿ ಮೂರ್ತಿಯೇ ಕಾಣಿಸದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ಅಮವಾಸ್ಯೆಗೆ ಆ ಮೂರ್ತಿ ತೊಳೆದು ಪೂಜೆ ಸಲ್ಲಿಸುತ್ತಿದ್ದ ಅಶ್ವಾರೂಢ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಸದಸ್ಯ ಉಮೇಶ ಜತ್ತಿ ಪುರಸಭೆ ಹಾಗೂ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಹೈಮಾಸ್ಟ್ ದೀಪ ಸರಿಪಡಿಸುವಂತೆ ಹೇಳಿ ಹೇಳಿ ಬೇಸತ್ತು ಕೊನೆಗೆ ತಾವೇ ಕಂದೀಲನ್ನು ಖರೀದಿಸಿ ಅದಕ್ಕೆ ಡಿಸೇಲ್ ಹಾಕಿಸಿ ರಾತ್ರಿ ಬೆಳಕು ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಸವ ಸಮಿತಿಯ ಸದಸ್ಯ ಉಮೇಶ ಜತ್ತಿ ಮಾತನಾಡಿ, ವಿಶ್ವಕ್ಕೆ ವಚನ ಸಾಹಿತ್ಯದ ಮೂಲಕ ಬೆಳಕು ನೀಡಿದವರು ಬಸವಣ್ಣನವರು. ಆದರೆ ಅವರ ಮೂರ್ತಿಯೇ ಇಂದು ಕತ್ತಲದಲ್ಲಿದೆ. ಇದನ್ನು ಕಂಡು ಕಾಣದಂತೆ ಮೌನ  ವಹಿಸಿರುವ ಪುರಸಭೆ ಹಾಗೂ ಹೆಸ್ಕಾಂ ಇಲಾಖೆಯ ಧೊರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಂದೀಲು ಕಟ್ಟಿರುವುದಾಗಿ ಹೇಳಿದರು.ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಬಸವೇಶ್ವರ ವೃತ್ತದೊಳಗಿನ ಆವರಣದಲ್ಲಿ ಬೇಕಾಬಿಟ್ಟಿಯಾಗಿ ಕಸ, ಹುಲ್ಲು ಬೆಳೆದಿದೆ.

ಬೇರೆ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಇರುವ ವೃತ್ತಗಳಲ್ಲಿ ಸ್ವಚ್ಛತೆ ಇದ್ದು ಪೂಜ್ಯನೀಯ ಭಾವನೆ ಬರುವಂತೆ ಇವೆ. ಆದರೆ ಇಲ್ಲಿ ಬಸವೇಶ್ವರ ವೃತ್ತಕ್ಕೆ ಬೇಕಾಬಿಟ್ಟಿ ಜಾಹೀರಾತು ಕರಪತ್ರಗಳು, ನಿಧನ ವಾರ್ತೆಯ ಬ್ಯಾನರ್‍ಗಳನ್ನು ಹಾಕಿ ಅಂದಗೆಡಿಸಲಾಗುತ್ತದೆ. ಪುರಸಭೆ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್. ಬಾಗಲಕೋಟ, ಸಿಬ್ಬಂದಿ ರಮೇಶ ಮಾಡಬಾಳ ಮಾತನಾಡಿ, ಹೆಸ್ಕಾಂನವರಿಗೆ ತಿಳಿಸಿದ್ದು ಹೊಸದಾಗಿ ಟಿಸಿ ಕೂಡಿಸಿದ್ದಾರೆ. ಈ ಕುರಿತಂತೆ ಸಾಕಷ್ಟು ಬಾರಿ ಹೆಸ್ಕಾಂನವರ ಗಮನಕ್ಕೆ ತರಲಾಗಿತ್ತು. ಟಿಸಿ ಸುಟ್ಟ ಕಾರಣ ಹೈಮಾಸ್ಟ್ ವಿದ್ಯುತ್ ದೀಪ ದುರಸ್ತಿ ವಿಳಂಬವಾಗಿದೆ ಎಂದು ಹೇಳಿದರು.

ಬಸವೇಶ್ವರ ಮೂರ್ತಿಗೆ ಕಂದೀಲು ಕಟ್ಟಿರುವ ಸುದ್ದಿ ಹರಡುತ್ತಿದ್ದಂತೆ ಎರಡೇ ಗಂಟೆಯಲ್ಲಿ ಹೊಸದಾಗಿ ಟಿಸಿ ಸಮೇತ ಆಗಮಿಸಿದ ಹೆಸ್ಕಾಂ ಇಲಾಖೆಯ ಸಿಬ್ಬಂದಿ ಟಿಸಿ ಅಳವಡಿಸಿದರು. ಇದೇ ವೇಳೆ ಪುರಸಭೆ ಸಿಬ್ಬಂದಿ ಅಶ್ವಕ್ಕೆ ಕಟ್ಟಿದ್ದ ಕಂದೀಲನ್ನು ಕೆಳಗಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin