ಹೇಮಾವತಿ ನಾಲಾ ಕಾಮಗಾರಿ ಯಶಸ್ವಿಯಾದ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

hemavati
ಚಿಕ್ಕನಾಯಕನಹಳ್ಳಿ, ಆ.30- ಹೇಮಾವತಿ ನಾಲಾ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು ಹಾಗೂ ಜಮೀನು ಕಳೆದುಕೊಂಡವರಿಗೆ ಕೂಡಲೇ ಪರಿಹಾರ ವಿತರಣೆ ಕೈಗೊಳ್ಳುವಂತೆ ಒತ್ತಾಯಿಸಿ ನಡೆಸಿದ ಉರುಳು ಸೇವೆ ಹಾಗೂ ಪ್ರತಿಭಟನೆ ಯಶಸ್ವಿಯಾಯಿತು.ತಾಲ್ಲೂಕಿನ ಹೇಮಾವತಿ ಕುಡಿಯುವ ನೀರಿನ ಹೋರಾಟ ಸಮಿತಿ ವತಿಯಿಂದ ನಡೆದ ಪ್ರತಿಭಟನೆ ಹಾಗೂ ಉರುಳು ಸೇವೆ ಕಾರ್ಯಕ್ರಮಕ್ಕೆ ಪ್ರಗತಿ ಪರ ರೈತರಿಗೆ ಎಳನೀರು ಕುಡಿಸುವುದು ಹಾಗೂ ಶಂಖ, ಜಾಗಟೆ ಭಾರಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿದೇ ಹೋದರೆ ವಿವಿಧ ಮಠಾಧಿಶ್ವರರು, ರೈತರು, ಸಂಘಸಂಸ್ಥೆಗಳ, ಸಾರ್ವಜನಿಕರ ಜೊತೆಗೂಡಿ ಸೆಪ್ಟೆಂಬರ್ 29 ರಿಂದ 31 ರವರೆಗೆ ಕೆ.ಬಿ.ಕ್ರಾಸ್‍ನಲ್ಲಿ ಮೂರು ದಿನಗಳ ಕಾಲ ದನಕರುಗಳನ್ನು ರಸ್ತೆಯಲ್ಲೇ ಕಟ್ಟಿ ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, 3 ದಿನಗಳ ಕಾಲ ಸ್ವಾಮಿಜಿಗಳು ಸ್ಥಳದಲ್ಲೇ ಪೂಜೆ, ಪ್ರಸಾದ ಸ್ವೀಕಾರ ಮಾಡಿ ಪ್ರತಿಭಟಿಸಲಾಗುವುದು ಎಂದು ಮಠಾಧೀಶರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ ಮಾತನಾಡಿ, ತಾಲ್ಲೂಕಿನ 22 ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವಂತೆ ಒತ್ತಾಯಿಸಿ ಅನೇಕ ಹೋರಾಟಗಳು ನಡೆದು ಸರ್ಕಾರ 102 ಕೋಟಿ ರೂ ಹಣ ಬಿಡುಗಡೆ ಮಾಡಿದರೂ ಕಾಮಗಾರಿ ಕುಂಟುತ್ತಾ ಸಾಗಿದೆ, ಇದರಿಂದ ತಾಲ್ಲೂಕಿನ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಕೂಡಲೇ ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.

ಹಿರಿಯೂರು ಅದಿಜಾಂಬವ ಮಠದ ಷಡಾಕ್ಷರಿ ಸ್ವಾಮಿಜಿ ಮಾತನಾಡಿ, ಇಡೀ ಮಾನವ ಕುಲ ನಿಂತಿರುವುದು ರೈತನು ಬೆಳೆದ ಬೆಳೆಯ ಮೇಲೆ, ಆತ ಬೆಳೆದರೆ ಮಾತ್ರ ನಾವು, ಅವರಿಲ್ಲವೆಂದರೆ ನಾವಿಲ್ಲ ಇದನ್ನು ಅರಿತು ರೈತನಿಗೆ ಅಗತ್ಯವಿರುವ ನೀರಿನ ಸಮಸ್ಯೆಯನ್ನು ಆಳುವ ಸರ್ಕಾರಗಳು ಪರಿಹರಿಸಬೇಕು ಎಂದು ಹೇಳಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೆಂಕೆರೆ ಸತೀಶ್, ಶಂಕರಪ್ಪ, ಗೋಡೆಕೆರೆ ಮಠದ ಮೃತ್ಯುಂಜಯ ಸ್ವಾಮಿಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನದೇಶೀಕೇಂದ್ರ ಸ್ವಾಮಿಜಿ, ಹೇಮಾವತಿ ಕುಡಿಯುವ ನೀರು ಹೋರಾಟ ಸಮಿತಿಯ ಅಧ್ಯಕ್ಷ ಬೇವಿನಹಳ್ಳಿ ಚೆನ್ನಬಸವಯ್ಯ, ಕಾರ್ಯದರ್ಶಿ ಸಿ.ಹೆಚ್.ಚಿದಾನಂದ್ ಮತ್ತಿತರರು ಹಾಜರಿದ್ದರು. ಇದೇ ವೇಳೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದವು.

 

► Follow us on –  Facebook / Twitter  / Google+

Facebook Comments

Sri Raghav

Admin