ಹೇಮಾವತಿ ನೀರು ಹರಿಸದಿದ್ದರೆ ಜನರು ಗುಳೇ ಹೋಗಬೇಕಾಗುತ್ತದೆ

ಈ ಸುದ್ದಿಯನ್ನು ಶೇರ್ ಮಾಡಿ

Tumakuru-Sogadu

ತುಮಕೂರು,ಆ.7-ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಜನರು ಗುಳೇ ಹೋಗಬೇಕಾಗುತ್ತದೆ. ಹಾಗಾಗಿ ಎಲ್ಲ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಹೋರಾಟ ಮಾಡುವುದು ಅನಿವಾರ್ಯ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಇಂದಿಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀರಿಗಾಗಿ ಹುಚ್ಚು ಮಾಸ್ತಿಗೌಡರು ಹಾಗೂ ವೈ.ಕೆ.ರಾಮಯ್ಯನವರು ಉಪವಾಸ ಸತ್ಯಾಗ್ರಹ ಮಾಡಿ ಇತಿಹಾಸದ ಪುಟ ಸೇರಿದ್ದಾರೆ. ಅದರಂತೆ ನಾವು ಕೂಡ ಈ ತರದ ಸತ್ಯಾಗ್ರಹ, ಪ್ರತಿಭಟನೆಗಳನ್ನು ಮಾಡುವ ಮೂಲಕ ಜಿಲ್ಲೆಗೆ ನೀರು ಹರಿಸಲು ಒತ್ತಾಯಿಸಬೇಕು ಎಂದರು.

ಮೊನ್ನೆ ನೀರಿಗಾಗಿ ಪಾದಯಾತ್ರೆ ಮತ್ತು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಕ್ಕೆ ಜಿಲ್ಲೆಯ ಜನ ಬೆಂಬಲ ನೀಡಿದ್ದರು. ಇಷ್ಟಾದರೂ ಜಿಲ್ಲೆಯ ಪರಿಸ್ಥಿತಿ ಅರಿತು ರಾಜ್ಯ ಸರ್ಕಾರ ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಜವಾಬ್ದಾರಿ ವಹಿಸಿಕೊಂಡು ಜಿಲ್ಲೆಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನೀರು ಹರಿಸುವಂತೆ ಧರಣಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಒಂದು ಟಿಎಂಸಿ ನೀರು ಹರಿಸುವಂತೆ ಸೂಚನೆ ನೀಡಿದ್ದರು. ಅದೇ ರೀತಿ ನಮ್ಮ ಜಿಲ್ಲೆಗೂ ನೀರು ಹರಿಸಬೇಕು ಎಂದ ಅವರು, ಈಗಾಗಲೇ ಜಲಾಶಯದಲ್ಲಿ 17 ಟಿಎಂಸಿ ನೀರು ಸಂಗ್ರಹವಾಗಿದೆ. ಅದರಲ್ಲಿ ಒಂದು ಟಿಎಂಸಿ ಬಲದಂಡೆಗೆ, 2 ಟಿಎಂಸಿ ಕಾವೇರಿ ಕೊಳಕ್ಕೆ, ಒಂದು ಟಿಎಂಸಿ ತಮಿಳುನಾಡಿಗೆ ನೀರು ಹರಿಯುತ್ತಿದೆ ಹಾಗೂ 5 ಟಿಎಂಸಿ ಡೆಡ್ ಸ್ಟೋರೆಜ್‍ನಲ್ಲಿದ್ದರೆ ಇನ್ನುಳಿದ 8 ಟಿಎಂಸಿ ನೀರನ್ನು ಎಲ್ಲಿಗೆ ಹರಿಸುತ್ತೀರಿ ಎಂದು ಪ್ರಶ್ನೆ ಮಾಡಿದರು.

ತುಮಕೂರು ನಗರಕ್ಕೆ ಎರಡೂವರೆ ಟಿಎಂಸಿ ನೀಡಿದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಆದರೆ ರಾಜ್ಯ ಸರ್ಕಾರ ಇದರ ಬಗ್ಗೆ ಗಮನಹರಿಸುತ್ತಿಲ್ಲ. ವಿರೋಧ ಪಕ್ಷಗಳು ಈ ಬಗ್ಗೆ ಸರ್ಕಾರದ ಕಣ್ಣು ತೆರೆಸುವಲ್ಲಿ ವಿಫಲವಾಗಿದೆ. ತಮಿಳುನಾಡಿಗೆ ನೀರು ಹರಿಸಲು ಉತ್ಸಾಹಕರಾಗಿದ್ದಾರೆ. ಆದರೆ ನಮಗೆ ನೀರು ನೀಡಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು.  ಮುಖ್ಯಮಂತ್ರಿಗಳೇ ಜಿಲ್ಲೆಗೆ ಬರಬೇಡಿ: ಇದೇ 17ರಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಜಲಾಶಯದಿಂದ ನೀರನ್ನು ಹರಿಸುವಂತೆ ಕ್ರಮ ಕೈಗೊಳ್ಳದಿದ್ದ ಮೇಲೆ ಜಿಲ್ಲೆಗೆ ಬರುವ ಯಾವುದೇ ನೈತಿಕತೆ ನಿಮ್ಮಗಿಲ್ಲ. ಕೂಡಲೇ ತುಮಕೂರು ಜಿಲ್ಲೆ ಹಾಗೂ ನಗರಕ್ಕೆ ಕುಡಿಯಲು ನೀರು ಒದಗಿಸಿ ನಂತರ ಜಿಲ್ಲೆಗೆ ಬನ್ನಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಬಸವರಾಜ್, ಗೋಪಾಲಕೃಷ್ಣ ,ಪ್ರಕಾಶ್, ಶಬ್ಬೀರ್ ಅಹಮ್ಮದ್ , ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin