ಹೈ ತೀರ್ಪು ಎತ್ತಿಹಿಡಿದ ಸುಪ್ರೀಂ : ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ 28 ಕೆಎಎಸ್ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

KPSC-Recruitment-Scam

ನವದೆಹಲಿ, ಏ.11-ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ(ಕೆಪಿಎಸ್‍ಸಿ) 1998ರಿಂದ 2004ರವರೆಗೆ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ-ಅವ್ಯವಹಾರಗಳು ನಡೆದಿವೆ ಎಂಬ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಎತ್ತಿ ಹಿಡಿದಿದೆ. ಇದರಿಂದಾಗಿ 28 ಕೆಎಎಸ್ ಅಧಿಕಾರಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅಲ್ಲದೇ ಕೆಲವು ಐಎಎಸ್ ಅಧಿಕಾರಿಗಳಿಗೂ ಹಿಂಬಡ್ತಿಯಾಗುವ ಸಾಧ್ಯತೆ ಇದೆ.

ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದು, ಈ ಅವಧಿಯಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಗಳು ಅನೂರ್ಜಿತವಾಗಲಿದ್ದು, ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.   1998, 1999 ಹಾಗೂ 2004ರಲ್ಲಿ ಕೆಪಿಎಸ್‍ಸಿ ನಡೆಸಿದ ಕರ್ನಾಟಕ ಆಡಳಿತ ಸೇವಾ(ಕೆಎಎಸ್) ಪರೀಕ್ಷೆ ಹಾಗೂ ಆಯ್ಕೆ ಸಂದರ್ಭದಲ್ಲಿ ನಡೆದಿರುವ ಹಣಕಾಸು ಅವ್ಯವಹಾರ, ನಕಲಿ ಪ್ರಮಾಣ ಪತ್ರ ಹಾಗೂ ಪಕ್ಷಪಾತಗಳ ಪ್ರಕರಣಗಳು ದೊಡ್ಡ ಸುದ್ದಿಯಾಗಿತ್ತು.

ಈ ಕುರಿತು ಸಿಐಡಿ 2011ರ ಮೇ ತಿಂಗಳಿನಲ್ಲೇ ವರದಿ ನೀಡಿದ್ದು, ಆಗಿನ ತಹಶೀಲ್ದಾರ್, ಸಹಾಯಕ ಆಯುಕ್ತರು ಸೇರಿದಂತೆ ಸರ್ಕಾರದ ಕೆಲವು ಉನ್ನತ ಅಧಿಕಾರಿಗಳು ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಸಲ್ಲಿಸಿತ್ತು. ಆಯೋಗದಲ್ಲಿ 1998 ರಿಂದ 2004ರವರೆಗೆ ನಡೆದಿರುವ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕೆಂದು ಸಿಐಡಿ ಹೈಕೋರ್ಟ್‍ಗೆ ಮನವಿ ಮಾಡಿತ್ತು.

ತಹಶೀಲ್ದಾರ್‍ಗಳಾದ ಆಶಾ ಫರ್ವಿನ್, ಡಿ.ಆರ್.ಪುಷ್ಪಾ, ವೈ.ಬಿ.ಅರ್ಚನಾ, ಸಲ್ಮಾ ಫಿರ್ದೋಷ್ ಹಾಗೂ ಅಲ್ಲಾ ಭಕ್ಷ್ ಸೇರಿದಂತೆ 19 ಅಧಿಕಾರಿಗಳ ವಿರುದ್ಧ ಸಿಐಡಿ ಪೊಲೀಸರು ಅವ್ಯವಹಾರಗಳನ್ನು ನಡೆಸಿರುವ ಆರೋಪ ಹೊರಿಸಿದ್ದರು.  ನಕಲಿ ಜಾತಿ ಪ್ರಮಾಣ ಪತ್ರ, ದಾಖಲೆಗಳನ್ನು ತಿದ್ದಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಕೆಪಿಎಸ್‍ಸಿ ಸದಸ್ಯರು ಹಾಗೂ ಅಧಿಕಾರಿಗಳೂ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಸ್ವಜನ ಪಕ್ಷಪಾತ ನಡೆಸಿದ್ದರು. ಕೆಲವರ ಪರವಾಗಿ ಸಂದರ್ಶನ ಹಾಗೂ ಪರೀಕ್ಷೆಯಲ್ಲಿ ಅವ್ಯವಹಾರ ನಡೆಸಿದ್ದಾರೆ. ಒಂದೇ ಜಾತಿಯ ಅಭ್ಯರ್ಥಿಗಳು ಏಕ ಕಾಲಕ್ಕೆ ಕೆಪಿಎಸ್‍ಸಿಯಲ್ಲಿ ನೇಮಕವಾಗುವಂತೆ ಮಾಡುವಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಒಡಿ ಆರೋಪಿಸಿ ಇದಕ್ಕೆ ಪೂರಕವಾದ ದಾಖಲೆಗಳನ್ನು ಹೈಕೋರ್ಟ್‍ಗೆ ಸಲ್ಲಿಸಿತ್ತು.
ಕೆಪಿಎಸ್‍ಸಿ ಅವ್ಯವಹಾರದ ವಿರುದ್ಧ ಖಲೀಲ್ ಅಹಮದ್ ಮತ್ತಿತರು ಕೋರ್ಟ್ ಮೋರೆ ಹೋಗಿದ್ದರು.

ಸಿಐಡಿ ಪೊಲೀಸರು ಹೈಕೋರ್ಟ್‍ಗೆ ಸಲ್ಲಿಸಿದ ತನಿಖಾ ವರದಿ ಪರಿಶೀಲನೆ ಹಾಗೂ ಪ್ರಕರಣಗಳ ವಿಚಾರಣೆ, ವಾದ-ಪ್ರತಿವಾದಗಳನ್ನು ಆಲಿಸಿದ್ದ ಹೈಕೋರ್ಟ್ ಕೆಪಿಎಸ್‍ಸಿ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಹೇಳಿತ್ತು. ಅಲ್ಲದೇ 1:5ರ ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಸೂಚಿಸಿತ್ತು ಹಾಗೂ 2014ರ ಮರು ಆಯ್ಕೆ ಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳುವಂತೆ ಸೂಚಿಸಿ ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಅನುವು ಮಾಡಿಕೊಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿತ್ತು.
ಕೆಪಿಎಸ್‍ಸಿ ಆಯ್ಕೆ ಪಟ್ಟಿಯಲ್ಲಿ ಅದರಲ್ಲೂ 1998ರ ನೇಮಕಾತಿ ವಿಷಯದಲ್ಲಿ ಲೋಪವಾಗಿದೆ ಎಂದು ಹೇಳಿದ್ದ ಹೈಕೋರ್ಟ್, ಈ ಸಂಬಂಧ ಮುಂದಿನ ಕ್ರಮಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೆಪಿಎಸ್‍ಸಿಗೆ ಸೂಚನೆಯನ್ನೂ ನೀಡಿತ್ತು.  ಹೈಕೋರ್ಟ್ ತೀರ್ಪಿನ ವಿರುದ್ಧ ಕೆಲವರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ದೀರ್ಘ ಕಾಲದಿಂದಲೂ ಈ ಪ್ರಕರಣದ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

Facebook Comments

Sri Raghav

Admin