‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಅನಂತನಾಗ್ ಹೊಸ ಅವತಾರ

ಈ ಸುದ್ದಿಯನ್ನು ಶೇರ್ ಮಾಡಿ

hotte

ಇವತ್ತಿನ ನಿತ್ಯ ಬದುಕನ್ನು ನಡೆಸಬೇಕಾದರೆ ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವುದು ಒಂದು ಊಟ, ಮತ್ತೊಂದು ಬಟ್ಟೆ.
ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರ ಚಿತ್ರೀಕರಣವನ್ನು ಪೂರ್ಣಗೊಳಿಸಿಕೊಂಡಿದೆ. ಸಂತೆಯಲ್ಲಿ ನಿಂತ ಕಬೀರ ಖ್ಯಾತಿಯ ಕಬಡ್ಡಿಬಾಬು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಈ ಚಿತ್ರದಲ್ಲಿ ಹಿರಿಯನಟ ಅನಂತನಾಗ್ ಹಾಗೂ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೆ ನೆರವೇರಿತು.

ಈ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ನರೇಂದ್ರ ಬಾಬು, ಅನಂತನಾಗ್ ಅವರೊಂದಿಗೆ ಪೂರ್ಣ ಪ್ರಮಾಣದ ಸಿನಿಮಾವೊಂದನ್ನು ಮಾಡಬೇಕು ಎನ್ನುವ ಆಸೆ ನನಗೆ ಬಹಳ ವರ್ಷಗಳಿಂದಲೂ ಇತ್ತು. ಕಬೀರ ಸಿನಿಮಾದಲ್ಲಿ ರಮಾನಂದರ ಚಿಕ್ಕ ಪಾತ್ರದಲ್ಲಿ ಅವರೊಂದಿಗೆ ಒಡನಾಟ ಬೆಳೆದು, ಈಗ ಇಡೀ ಸಿನಿಮಾದಲ್ಲಿ ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಸ್ಕ್ರಿಪ್ಟ್ ಓದಿದ ಮೂರೇ ದಿನದಲ್ಲಿ ಅವರು ಸಿನಿಮಾದಲ್ಲಿ ಆಕ್ಟ್ ಮಾಡೋದಕ್ಕೆ ಒಪ್ಪಿಕೊಂಡರು. ಎರಡು ಜನರೇಷನ್‍ನಲ್ಲಿ ನಡೆವ ಕಥೆ ಈ ಚಿತ್ರದಲ್ಲಿದೆ. ಮ್ಯಾರೇಜ್ ರಿಲೇಷನ್‍ಶಿಪ್ ಮತ್ತು ಲಿವಿಂಗ್ ರಿಲೇಷನ್‍ಶಿಪ್ ಈ ಎರಡರ ಸುತ್ತ ಈ ಚಿತ್ರದ ಕಥಾನಕ ನಡೆಯುತ್ತದೆ. ಎರಡೂ ಜನರೇಷನ್‍ಗೂ ಅನ್ವಯವಾಗುವಂಥ ಸಬ್ಜೆಕ್ಟ್ ಇದಾಗಿದೆ ಎಂದು ಹೇಳಿದರು.

ನಟ ಅನಂತನಾಗ್ ಮಾತನಾಡಿ, ಈ ಚಿತ್ರದ ನಿರ್ದೇಶಕ ನರೇಂದ್ರಬಾಬು ನನಗೆ ಎರಡ್ಮೂರು ಸಬ್ಜೆಕ್ಟ್‍ಗಳನ್ನು ಹೇಳಿದರು. ಅದರಲ್ಲಿ ಈ ಕಥೆಯನ್ನು ಒಪ್ಪಿಕೊಂಡೆ. ತುಂಬಾ ಡಿಫರೆಂಟ್ ಜಾನರ್ ಸಿನಿಮಾ ಇದು. ಸಾಂಪ್ರದಾಯಿಕ ಮದುವೆ, ಕುಟುಂಬ ವ್ಯವಸ್ಥೆ, ಇಂದಿನ ಯುವಜನಾಂಗದಲ್ಲಿ ನಡೆಯುತ್ತಿರುವ ಲಿವಿಂಗ್ ರಿಲೇಷನ್‍ಷಿಪ್ ಎಲ್ಲವನ್ನೂ ಈ ಚಿತ್ರದಲ್ಲಿ ಭಾವನಾತ್ಮಕವಾಗಿ ಪ್ರೇಕ್ಷಕರಿಗೆ ತೋರಿಸಲಾಗಿದೆ ಎಂದು ಹೇಳಿದರು. ಚಿತ್ರದ ನಾಯಕಿ ರಾಧಿಕಾ ಚೇತನ್ ಮಾತನಾಡಿ, ನೀವು ಅನಂತನಾಗ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಕೂಡಲೇ ಅರ್ಧ ಸಿನಿಮಾವನ್ನು ಒಪ್ಪಿಕೊಂಡೆ. ನಂತರ ಕಥೆ ಕೇಳುತ್ತಿದ್ದಂತೆಯೇ ಪೂರ್ಣ ಸಿನಿಮಾವನ್ನು ಒಪ್ಪಿಕೊಂಡೆ. ಕಾರ್ಪೊರೇಟ್ ಸ್ಟೈಲ್‍ನಲ್ಲಿ ಇರುವ ಆಧುನಿಕ ಮಹಿಳೆಯ ಪಾತ್ರ ನನ್ನದು. ಇಂಡಿಪೆಂಡೆಂಟ್ ಆಗಿ ಮಹಿಳೆಯೊಬ್ಬಳು ಹೇಗೆ ಜೀವನ ನಿರ್ವಹಿಸುತ್ತಾಳೆ ಅನ್ನೋದನ್ನು ನನ್ನ ಪಾತ್ರದ ಮೂಲಕ ಹೇಳಲಾಗಿದೆ. ಒಂದು ಒಳ್ಳೇ ಟೀಮ್ ಜೊತೆ ಕೆಲ್ಸ ಮಾಡಿದ್ದು ಹೊಸ ಅನುಭವ ಎಂದು ಹೇಳಿದರು.

ರಂಗಭೂಮಿ ಹಿನ್ನೆಲೆಯ ರಾಮಚಂದ್ರ ಹಡಪದ್ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿಜಯ ಪ್ರಕಾಶ್, ಅರ್ಮಾನ್ ಮಲ್ಲಿಕ್, ವರ್ಷ, ವಾಣಿ ಸತೀಶ್, ಶ್ವೇತ ಪ್ರಭು ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿನಾಯಕರಾಮ್ ಕಲಗಾರು, ನರೇಂದ್ರ ಬಾಬು ಸಾಹಿತ್ಯ ಬರೆದಿದ್ದಾರೆ. ಈ ಹಿಂದೆ ಕಬಡ್ಡಿ, ಸಂತೆಯಲ್ಲಿ ನಿಂತ ಕಬೀರದಂಥ ಸದಭಿ ರುಚಿಯ ಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ನರೇಂದ್ರ ಬಾಬು (ಕಬ್ಬಡ್ಡಿ ಬಾಬು) ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಿರಿಯ ಛಾಯಾಗ್ರಹಕ ಪಿಕೆಹೆಚ್ ದಾಸ್ ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸಿದ್ದಾರೆ. ಕಲರ್ಸ್ ಆಫ್ ಆನೇಕಲ್ ಮತ್ತು ಆಕ್ಮೇ ಮೂವೀಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸುದರ್ಶನ್.ಜಿ, ರಾಮಮೂರ್ತಿ ಹೆಚ್.ಆರ್. ಮತ್ತು ಹರೀಶ್ ಶೇರಿಗಾರ್ ಬಂಡವಾಳ ಹೂಡಿ ಚಿತ್ರ ನಿರ್ಮಿಸಿದ್ದಾರೆ. ಜಂಗಲ್ ಮ್ಯೂಸಿಕ್ ಈ ಚಿತ್ರದ ಹಾಡುಗಳನ್ನು ಮಾರುಕಟ್ಟೆಗೆ ತಂದಿದೆ.

Facebook Comments

Sri Raghav

Admin