ಶಿರಸಿಯಲ್ಲಿ ಪರೇಶ್ ಸಾವು ಖಂಡಿಸಿ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Sirsi--02

ಮಂಗಳೂರು, ಡಿ.12- ನಿನ್ನೆ ಉತ್ತರ ಕನ್ನಡದ ಕುಮಟಾದಲ್ಲಿ ಪೊಲೀಸರಿಂದ ಲಾಠಿಚಾರ್ಜ್… ಇಂದು ಶಿರಸಿಯಲ್ಲಿ ಅಶ್ರುವಾಯು… ಬಿಜೆಪಿ ಕಾರ್ಯಕರ್ತರಿಂದ ನಡೆದ ಪ್ರತಿಭಟನೆ… ಬಂದ್ ಸಂದರ್ಭದಲ್ಲಿ ಉಂಟಾದ ಘರ್ಷಣೆ… ಕಲ್ಲು ತೂರಾಟದಿಂದ ಬೆಚ್ಚಿಬಿದ್ದ ಉತ್ತರ ಕನ್ನಡದ ಜನ… ಯುವಕ ಪರೇಶ್ ಮೇಸ್ತ್ತಾ ಅನುಮಾನಾಸ್ಪದ ಸಾವು ಖಂಡಿಸಿ ನಿನ್ನೆಯಷ್ಟೆ ಉತ್ತರ ಕನ್ನಡದ ಕುಮಟಾದಲ್ಲಿ ನಡೆದ ಬಂದ್ ವೇಳೆ ಘರ್ಷಣೆ, ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್, ಐಜಿಪಿ ಕಾರಿಗೆ ಬೆಂಕಿಯಿಂದ ಕೊತಕೊತ ಕುದಿಯುತ್ತಿದ್ದ ಉತ್ತರ ಕನ್ನಡದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಇಂದು ಶಿರಸಿಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ನಗರದ ವಿಕಾಸ್ ಆಶ್ರಮದ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿ ಕಲ್ಲುತೂರಾಟ ನಡೆದು ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದಾರೆ.

ಇದರಿಂದ ಉತ್ತರ ಕನ್ನಡದ ಶಿರಸಿ ನಿಗಿನಿಗಿ ಕೆಂಡದಂತಾಗಿದೆ. ಶಿರಸಿ ಪಟ್ಟಣದಲ್ಲಿ ನಡೆದ ಈ ಘಟನೆಯಿಂದ ಅಲ್ಲಿನ ಜನ ಆತಂಕಕ್ಕೆ ಒಳಗಾಗಿದ್ದಾರೆ. ಪರೇಶ್ ಹತ್ಯೆ ಖಂಡಿಸಿ ಶಿರಸಿ ಪಟ್ಟಣ ಬಂದ್ ನಡೆಸುತ್ತಿದ್ದ ಸಂದರ್ಭದಲ್ಲಿ ಜನರ ಆಕ್ರೋಶದ ಕಿಚ್ಚು ಪೊಲೀಸರ ಮೇಲೆ ತಿರುಗಿ ಈ ವೇಳೆ ನಡೆಸಿದ ಕಲ್ಲು ತೂರಾಟದ ನಡೆಸಿದ ಪರಿಣಾಮ ಪೊಲೀಸರೂ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಪ್ರತಿಭಟನಾನಿರತ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ನಿಷೇಧಾಜ್ಞೆ ಜಾರಿ:  ಉತ್ತರ ಕನ್ನಡದ ಹಲವು ಪಟ್ಟಣಗಳಲ್ಲಿ ಬಿಜೆಪಿ ಬಂ ದ್‍ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಖಂಡನೀಯ: ನಿಷೇಧಾಜ್ಞೆ ಉಲ್ಲಂಘನೆ ಮಾಡಿ ಪ್ರತಿಭಟನೆ ನಡೆಸುವುದು ಖಂಡನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಶಾಂತಿ-ಸೌಹಾರ್ದತೆ ಕಾಪಾಡಲು ಎಲ್ಲರೂ ಮುಂದಾಗಬೇಕು. ಆದರೆ, ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡುವುದು ಎಷ್ಟು ಸಮಂಜಸ. ಕಾನೂನು ಉಲ್ಲಂಘಿಸುವವರು ಯಾರೇ ಆಗಿದ್ದರೂ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಮಸ್ಯೆ ಏನೇ ಇದ್ದರೂ ಮಾತುಕತೆ ಮೂಲಕ ಪರಿಹರಿಸಿಕೊಳ್ಳೋಣ. ಸೌಹಾರ್ದಯುತ ವಾತಾವರಣ ಕಾಪಾಡೋಣ. ಅದನ್ನು ಬಿಟ್ಟು ಈ ರೀತಿ ಸಂಘರ್ಷ ಮಾಡುವುದು ಬೇಡ ಎಂದು ದೇಶಪಾಂಡೆ ಸಲಹೆ ಮಾಡಿದ್ದಾರೆ.

Facebook Comments

Sri Raghav

Admin