ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ: ಕೆಂಪಾಂಬ ತಂಡಕ್ಕೆ ಪ್ರಥಮ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

tumkur
ತುಮಕೂರು,ಅ.24- ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶ್ರೀರಾಮ ಕನ್ನಡ ಯುವಕ ಸಂಘ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ತಿಪಟೂರಿನ ಕೆಂಪಾಂಬ ತಂಡ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.  ಮೊದಲ ಸ್ಥಾನ ಪಡೆದ ತಿಪಟೂರಿನ ಕೆಂಪಾಂಬ ತಂಡ 15 ಸಾವಿರ ನಗದು ಬಹುಮಾನದೊಂದಿಗೆ ಅಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಲೀಗ್ ಹಂತದಲ್ಲಿ ಮೂರು ಪಂದ್ಯಗಳಲ್ಲಿ ಎರಡಲ್ಲಿ ಗೆಲುವು ಪಡೆದು ಅಂತಿಮ ಪಂದ್ಯದಲ್ಲಿ ಸೋತ ತುಮಕೂರಿನ ಡಿವೈಇಎಸ್ ತಂಡ ಎರಡನೇ ಬಹುಮಾನದೊಂದಿಗೆ 10 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಅಂತಿಮ ಪಂದ್ಯದಲ್ಲಿ ಕೆಂಪಾಂಬ ತಂಡ 32-8ರ ಅಂತದಲ್ಲಿ ಡಿವೈಇಎಸ್ ತಂಡವನ್ನು ಸೋಲಿಸಿತು  ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ 18 ತಂಡಗಳು ಭಾಗವಹಿಸಿದ್ದು,ಅಂತಿಮವಾಗಿ ಲೀಗ್ ಹಂತಕ್ಕೆ ತುಮಕೂರಿನ ಭೂಮಿ,ಡಿವೈಇಎಸ್,ತಿಪಟೂರಿನ ಕೆಂಪಾಂಬ ಮತ್ತು ಪಾವಗಡ ತಂಡಗಳು ಬಂದಿದ್ದು,ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ್ದವು.ಪ್ರತಿ ತಂಡ ಮೂರು ಪಂದ್ಯಗಳನ್ನು ಆಟವಾಡಬೇಕಾಗಿದ್ದು, ಸತತ ಮೂರು ಗೆಲುವು ಪಡೆದ ತಂಡಕ್ಕೆ ಪ್ರಥಮ ಸ್ಥಾನ ಪಡೆಯುವುದು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು,ಆಟಗಾರರಿಗೆ ಸರಕಾರದಿಂದ ಉತ್ತಮ ಬೆಂಬಲವಿದೆ. ಸರಕಾರಿ ಕೆಲಸವಲ್ಲದೆ, ಖಾಸಗಿ ಕಂಪನಿಗಳು ಸಹ ಉದ್ಯೋಗ ನೀಡಿವೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.  ಗೆಳೆಯರ ಬಳಗದ ಗೋವಿಂದರಾಜು ಮಾತನಾಡಿ, ಮನಸ್ಸಿಗೆ ಸಂತೋಷ ನೀಡುವ ಕ್ರೀಡೆಗಳಲ್ಲಿ ಕಬಡ್ಡಿಯೂ ಒಂದು.ಕ್ರೀಡೆಯಿಂದ ಭವಿಷ್ಯ ಉಜ್ವಲವಾಗುವುದಲ್ಲದೆ, ಆರೋಗ್ಯವೂ ಲಭಿಸುತ್ತದೆ.ಭಾರತದಲ್ಲಿ ಹುಟ್ಟಿದ ಕಬಡ್ಡಿ ಇಂದು ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿರುವುದು ಸಂತೋಷದ ವಿಷಯ ಎಂದರು.  ನಗರಪಾಲಿಕೆ ಸದಸ್ಯ ಟಿ.ಹೆಚ್.ಬಾಲಕೃಷ್ಣ,ಜೆಡಿಎಸ್ ಯುವಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಹೆಚ್.ಜಯರಾಮ್, ವಕೀಲ ಹಿರೇಹಳ್ಳಿ ಮಹೇಶ್, ಮೆಡಿಕಲ್ ಮಧು,ಮಾಜಿ ತಾ.ಪಂ.ಅಧ್ಯಕ್ಷ ಹೆಚ್.ಟಿ.ವೆಂಕಟೇಶ್,ಎಲೆಮಂಡಿ ರಾಮಣ್ಣ, ಲೋಕೇಶ್, ಶ್ರೀರಾಮಕನ್ನಡ ಯುವಕ ಸಂಘದ ಉಪಾಧ್ಯಕ್ಷ ಗುರುಪ್ರಕಾಶ್, ಕಾರ್ಯದರ್ಶಿ ಹ್ಯಾರಿ ಡೇವಿಡ್, ಖಜಾಂಚಿ ವಿಜಯಕುಮಾರ್, ಕ್ರೀಡಾ ತರಬೇತುದಾರಾದ ಮಹಮದ್ ಇಸ್ಮಾಯಿಲ್, ಶಿವಪ್ರಸಾದ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin