ಹೊಸೂರು ಶಾಸಕನ ಮನೆಗೆ ಶಶಿಕಲಾ ಭೇಟಿ, ಬಹಿರಂಗವಾಯ್ತು ಸ್ಫೋಟಕ ಮಾಹಿತಿ..!

ಈ ಸುದ್ದಿಯನ್ನು ಶೇರ್ ಮಾಡಿ

Sasikala--Jail--01

ಚನ್ನೈ, ಆ.23- ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಹೊಸೂರಿನ ಶಾಸಕರೊಬ್ಬರ ಮನೆಗೆ ಭೇಟಿ ನೀಡಿರುವುದು ಪತ್ತೆಯಾಗಿದೆ. ಬಂದೀಖಾನೆ ಇಲಾಖೆಯ ಮಾಜಿ ಡಿಐಜಿ ಹಾಗೂ ಹಾಲಿ ರಸ್ತೆ ಸುರಕ್ಷತೆ ವಿಭಾಗದ ಡಿಐಜಿಯಾಗಿರುವ ಡಿ.ರೂಪಾ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದು ಬಹಿರಂಗಗೊಂಡಿದೆ.

ಪರಪ್ಪನ ಅಗ್ರಹಾರದಲ್ಲಿದ್ದ ಶಶಿಕಲಾ ಹೊಸೂರಿಗೆ ತೆರಳಿ ತಮ್ಮದೇ ಪಕ್ಷದ ಶಾಸಕರೊಬ್ಬರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಶಶಿಕಲಾ ಜೈಲಿನಿಂದ ಹೊರ ಹೋಗುತ್ತಿರುವ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿನ ಅಧಿಕಾರಿಗಳೇ ಸರ್ಕಾರಿ ವಾಹನದಲ್ಲಿ ಅವರನ್ನು ಶಾಸಕರ ನಿವಾಸಕ್ಕೆ ಕರೆದೊಯ್ದಿದ್ದಾರೆ. ಅಧಿಕಾರಿಗಳ ಕುಮ್ಮಕ್ಕು ಇಲ್ಲದೆ ಶಿಕ್ಷೆಗೊಳಗಾಗಿರುವ ಖೈದಿಯೊಬ್ಬರು ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನನಗೆ ಸಿಕ್ಕಿರುವ ಖಚಿತ ಮಾಹಿತಿ ಹಾಗೂ ನಾನು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಶಶಿಕಲಾ ಹಾಗೂ ಅವರ ಆಪ್ತರಿಗೆ ರಾಜ್ಯಾತಿಥ್ಯ ನೀಡಲಾಗುತ್ತಿತ್ತು.

ಇಲ್ಲಿನ ಅಧಿಕಾರಿಗಳು ಕೆಲವು ಗಣ್ಯ ಖೈದಿಗಳ ಜತೆ ಶಾಮೀಲಾಗಿ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಅಧಿಕಾರಿಗಳು ಗೃಹ ಸಚಿವರು ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜಾತಿಥ್ಯ: ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ನಿಯಮದಂತೆ ಅಪರಾಧಿಯಾಗಿರುವುದರಿಂದ ಅವರು ಸಾಮಾನ್ಯ ಖೈದಿಗಳಂತೆ ಬಿಳಿ ವಸ್ತ್ರ ಧರಿಸಬೇಕು. ಅಲ್ಲದೆ ಅವರು ಗಣ್ಯವ್ಯಕ್ತಿ ಅಲ್ಲದ ಕಾರಣ ಸಾಮಾನ್ಯರಂತೆಯೇ ಕೊಠಡಿಯಲ್ಲೇ ಇರಬೇಕು.

ಇದುವರೆಗೂ ಶಶಿಕಲಾ ಹಾಗೂ ಅವರ ಗೆಳತ ಇಳವರಿಸಿ, ದತ್ತುಪುತ್ರ ಸುಧಾಕರ್ ಒಂದೇ ಒಂದು ದಿನ ಬಿಳಿ ವಸ್ತ್ರ ಧರಿಸಿಲ್ಲ. ಜತೆಗೆ ಜೈಲಿನ ಊಟವನ್ನು ಸಹ ಮಾಡಿಲ್ಲ. ಹೊರಗಿನಿಂದ ಅವರಿಗೆ ಊಟ ತಂದು ಕೊಡಲಾಗುತ್ತದೆ. ನ್ಯಾಯಾಲಯದ ಅನುಮತಿ ಇಲ್ಲದೆ ಖೈದಿಗಳಿಗೆ ಹೊರಗಿನಿಂದ ಇಲ್ಲವೇ ಮನೆಯಿಂದ ಊಟ ತರುವಂತಿಲ್ಲ. ಇದು ಕೂಡ ಕಾನೂನು ಉಲ್ಲಂಘನೆಯಾಗಿದೆ.

2017 ಮಾರ್ಚ್ 4ರಂದು ಗೃಹ ಇಲಾಖೆ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಬೆಂಗಳೂರಿನ ಪರಪ್ಪನ ಅಗ್ರಹಾದಲ್ಲಿ ನಡೆಯುತ್ತಿರುವ ಅದ್ವಾನಗಳನ್ನು ಸರಿಪಡಿಸುವಂತೆ ಸೂಚಿಸಿದ್ದೆ. ಶಶಿಕಲಾ ವರ್ಗ 1 ಇಲ್ಲವೇ ಗಣ್ಯ ಖೈದಿ ಅಲ್ಲ. ನ್ಯಾಯಾಲಯ ಅವರನ್ನು ಸಾಮಾನ್ಯ ಖೈದಿ ಎಂದೇ ಪರಿಗಣಿಸಿದೆ. ಆದರೆ, ಅವರಿಗೆ ಯಾವ ಕಾರಣಕ್ಕಾಗಿ ವಿವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಜತೆಗೆ ನಕಲಿ ಛಾಪಾಕಾಗದ ಹಗರಣದ ಪ್ರಮುಖ ರೂವಾರಿ ಅಬ್ದುಲ್ ಕರಿಂ ತೆಲಗಿಗೂ ಕೂಡ ಇದೇ ರಾಜಾತೀಥ್ಯ ನೀಡಲಾಗುತ್ತಿದೆ. ಇವರು ಇರುವ ಕೊಠಡಿಗಳಿಗೆ ಪ್ರತ್ಯೇಕ ಬ್ಯಾರಿಕೇಡ್, ಎಲ್‍ಇಡಿ ಟಿವಿ, ದಿನಪತ್ರಿಕೆಗಳು, ಐಷಾರಾಮಿ ಬೆಡ್ ಸೇರಿದಂತೆ ವಿವಿಧ ಸೌಲತ್ತುಗಳನ್ನು ನೀಡಲಾಗುತ್ತಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸುವಂತೆ ರೂಪಾ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

Facebook Comments

Sri Raghav

Admin