ಹೊಸ ವರ್ಷಕ್ಕೆ ರಾಜ್ಯದ ಜನತೆಗೆ ಸರ್ಕಾರದಿಂದ ‘ಕರೆಂಟ್’ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Electricity--0021

ಬೆಂಗಳೂರು, ಡಿ.9- ಹೊಸ ವರ್ಷದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಕೊಡಲು ಸರ್ಕಾರ ಮುಂದಾಗಿದೆ. ಈ ಬಾರಿ ರಾಜ್ಯದ ಎಲ್ಲಾ ಕಡೆ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿದ್ದರೂ ವಿದ್ಯುತ್ ಕಂಪೆನಿಗಳ ನಿರ್ವಹಣೆ, ಖರ್ಚು ವೆಚ್ಚ ಮುಂದಿಟ್ಟುಕೊಂಡು ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಲು ಮುಂದಾಗಿದೆ. ಈ ಸಂಬಂಧ ರಾಜ್ಯದ ಬೆಸ್ಕಾಂ (ಬೆಂಗಳೂರು ವಿಭಾಗ), ಚೆಸ್ಕಾಂ (ಮೈಸೂರು ವಿಭಾಗ), ಮೆಸ್ಕಾಂ (ಮಂಗಳೂರು ವಿಭಾಗ), ಹೆಸ್ಕಾಂ (ಹುಬ್ಬಳ್ಳಿ ವಿಭಾಗ) ಹಾಗೂ ಜೆಸ್ಕಾಂ (ಕಲಬುರಗಿ ವಿಭಾಗ)ದಿಂದ ಸಾರ್ವಜನಿಕರ ಅಹವಾಲು ಪಡೆಯಲು ಮುಂದಾಗಿದೆ.

ಪ್ರತಿ ಯೂನಿಟ್‍ಗೆ ವಿದ್ಯುತ್ ದರವನ್ನು ಒಂದರಿಂದ 1.60ರೂ.ಗೆ ಹೆಚ್ಚಳ ಮಾಡಬೇಕೆಂದು ವಿದ್ಯುತ್ ಕಂಪೆನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‍ಸಿ) ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ವರ್ಷ ವಿದ್ಯುತ್ ಕಂಪೆನಿಗಳು ದರ ಪರಿಷ್ಕರಣೆ ಮಾಡುವಂತೆ ಕೆಇಆರ್‍ಸಿಗೆ ಪ್ರಸ್ತಾವನೆ ಸಲ್ಲಿಸುವುದು ಸರ್ವೇ ಸಾಮಾನ್ಯ. ದರ ಪರಿಷ್ಕರಣೆ ಸಂಬಂಧ ಕೆಇಆರ್‍ಸಿ 90 ದಿನಗಳವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತದೆ. ಬಳಿಕವಷ್ಟೇ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ದರ ಏರಿಕೆ ಮಾಡುವುದು ವಾಡಿಕೆಯಾಗಿದೆ.

ಕಳೆದ ಬಾರಿ ಪ್ರತಿ ಯೂನಿಟ್‍ಗೆ ಬೆಂಗಳೂರು ಹೊರತು ಪಡಿಸಿ ಉಳಿದ ಭಾಗಗಳಲ್ಲಿ 48 ಪೈಸೆಯನ್ನು ಹೆಚ್ಚಳ ಮಾಡಲಾಗಿತ್ತು. ಇದರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆ ಪ್ರತ್ಯೇಕ ದರವನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಬೆಸ್ಕಾಂ ಪ್ರತಿ ಯೂನಿಟ್‍ಗೆ 1.45ರೂ. , ಜೆಸ್ಕಾಂ 1.65, ಮೆಸ್ಕಾಂ 1.08, ಜೆಸ್ಕಾಂ 1.36ರೂ. ಹಾಗೂ ಹೆಸ್ಕಾಂ 1.23ರೂ.ಗೆ ದರ ಹೆಚ್ಚಳ ಮಾಡಬೇಕೆಂದು ಕೆಇಆರ್‍ಸಿಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿದೆ ಎಂದು ತಿಳಿದು ಬಂದಿದೆ.

ಸೆಪ್ಟಂಬರ್ ಹಾಗೂ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ರಾಜ್ಯದ ನಾನಾ ಕಡೆ ಉತ್ತಮ ಮಳೆಯಾದ್ದರಿಂದ ಜಲಾಶಯಗಳು ಭರ್ತಿಯಾದವು. ಹೀಗಾಗಿ ವಿದ್ಯುತ್ ಉತ್ಪಾದನೆಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ ಎಂಬುದನ್ನು ಹೊರತುಪಡಿಸಿದರೆ, ವಿದ್ಯುತ್ ಉತ್ಪಾದನೆ ಮಾಡುವ ಪ್ರಮುಖ ಕೇಂದ್ರಗಳಲ್ಲಿ ನಿರ್ವಹಣಾ ವೆಚ್ಚವೇ ಸರ್ಕಾರಕ್ಕೆ ಹೊರೆಯಾಗುತ್ತದೆ. ಇದರ ಜತೆಗೆ ಬಾಕಿ ಉಳಿಸಿ ಕೊಂಡಿರುವ ಹಣವೂ ನಿಗದಿತ ಸಮಯಕ್ಕೆ ಪಾವತಿಯಾಗದ ಕಾರಣ ವಿದ್ಯುತ್ ಪೂರೈಕೆ ಕಂಪೆನಿಗಳು ದರ ಏರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿವೆ. ಕೆಲವು ಕಡೆ ಬರಗಾಲ ಆವರಿಸಿರುವ ಕಾರಣ ರೈತರು ಬಾಕಿ ಹಣವನ್ನು ಚುಕ್ತಾ ಮಾಡುತ್ತಿಲ್ಲ. ಮತ್ತೊಂದೆಡೆ ದೊಡ್ಡ ದೊಡ್ಡ ಕೈಗಾರಿಕಾ ಉದ್ಯಮಿಗಳು ಕೂಡ ಕೋಟಿ ಕೋಟಿ ಬಾಕಿ ಹಣ ಉಳಿಸಿಕೊಂಡಿದ್ದಾರೆ.

ಬಾಕಿ ಹಣ ಇದೇ ಎಂಬ ಕಾರಣಕ್ಕಾಗಿ ರೈತರ ಮನೆ ಇಲ್ಲವೇ ಪಂಪ್‍ಸೆಟ್‍ಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ರೈತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹೀಗೆ ಅಡಕತ್ತರಿಯಲ್ಲಿ ವಿದ್ಯುತ್ ಕಂಪೆನಿಗಳು ಸಿಲುಕಿರುವ ಕಾರಣ ಜನತೆಗೆ ಈ ಬಾರಿ ವಿದ್ಯುತ್ ಶಾಕ್ ಆಗುವುದು ಗ್ಯಾರಂಟಿ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin