ಹೊಸ ವರ್ಷಕ್ಕೆ ಶಾಕ್ : ರೈಲು ಪ್ರಯಾಣ ದರ ಹೆಚ್ಚಳ…?
ನವದೆಹಲಿ, ಡಿ.11-ರೈಲು ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಸಂಪನ್ಮೂಲ ಕ್ರೋಢೀಕರಣ ಪ್ರಸ್ತಾವನೆಯಲ್ಲಿ ಕೇಂದ್ರ ಸರ್ಕಾರ ಪ್ರಯಾಣ ದರ ಹೆಚ್ಚಿಸಲು ಉದ್ದೇಶಿಸಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹೊಸ ವರ್ಷದ ಆರಂಭದ ಮಾಸದಲ್ಲೇ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹೊಸ ಪ್ರಸ್ತಾವನೆಯಲ್ಲಿ ರೈಲು ಹಳಿ ವ್ಯವಸ್ಥೆಯನ್ನು ಬಲಗೊಳಿಸಲು ಮತ್ತು ಸಿಗ್ನಲ್ ಸಿಸ್ಟಮ್ನನ್ನು ಉನ್ನತೀಕರಣಗೊಳಿಸಲು ಉದ್ದೇಶಿಲಾಗಿದೆ. ಅಲ್ಲದೇ ಅಪಘಾತಗಳನ್ನು ತಡೆಗಟ್ಟುವುದಕ್ಕಾಗಿ ಮಾನವರಹಿತ ಲೆವಲ್ ಕ್ರಾಸಿಂಗ್ ನಿರ್ಮೂಲನೆ ಸೇರಿದಂತೆ ಸುರಕ್ಷತೆಗೆ ಸಂಬಂಧಪಟ್ಟ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಕ್ಕಾಗಿ ಸಂಪನ್ಮೂಲ ಸಂಗ್ರಹಿಸಬೇಕಾದರೆ ಸುರಕ್ಷತಾ ಸುಂಕ ವಿಧಿಸಬೇಕೆಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ರೈಲು ಪ್ರಯಾಣದರ ಏರಿಕೆ ಅನಿವಾರ್ಯವಾಗಿದೆ ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.
ಇದಕ್ಕೆ ಪುಷ್ಟಿ ನೀಡುವಂತೆ ವಿಶೇಷ ಸುರಕ್ಷತೆ ನಿಧಿ ಸ್ಥಾಪನೆ ಪ್ರಸ್ತಾವನೆಯನ್ನು ಸಚಿವಾಲಯ ತಳ್ಳಿ ಹಾಕಿದ್ದು, ಬದಲಿಗೆ ರೈಲ್ವೆ ಸುರಕ್ಷತೆಗೆ ಹೆಚ್ಚು ಸಂಪನ್ಮೂಲ ಕ್ರೋಢೀಕರಿಸಲು ಉದ್ದೇಶಿಸಿದೆ.
ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ವಿಶೇಷ ರಾಷ್ಟ್ರೀಯ ರೈಲ್ ಸಂರಕ್ಷಣಾ ಕೋಶ ಸೃಷ್ಟಿಸಲು 1,19,183 ಕೋಟಿ ರೂ.ಗಳ ನೆರವು ನೀಡಬೇಕೆಂದು ಈ ಹಿಂದೆ ರೈಲ್ವ ಸಚಿವ ಸುರೇಶ್ ಪ್ರಭು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದರು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download