ಹೊಸ ವರ್ಷಾಚರಣೆ ವೇಳೆ ಕಾಮಚೇಷ್ಟೆ : ವರದಿ ಕೇಳಿದ ರಾಜ್ಯಪಾಲ ವಾಲಾ

ಈ ಸುದ್ದಿಯನ್ನು ಶೇರ್ ಮಾಡಿ

Bengaluru-New-Year

ಬೆಂಗಳೂರು, ಜ.5– ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ಕೆಲ ದುಷ್ಕರ್ಮಿಗಳು ನಡೆಸಿರುವ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ರಾಜ್ಯಪಾಲ ವಿ.ಆರ್.ವಾಲಾ ಅವರು ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕುಂಟಿಯಾ ಅವರಿಗೆ ಸೂಚನೆ ನೀಡಿರುವ ರಾಜ್ಯಪಾಲರು ಡಿ.31ರಂದು ಬ್ರಿಗೇಡ್ ರಸ್ತೆ ಮತ್ತು ಕಮ್ಮನಹಳ್ಳಿಯಲ್ಲಿ ಯುವತಿಯರ ಮೇಲೆ ನಡೆದ ದೌರ್ಜನ್ಯ ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ನಿರ್ದೇಶಿಸಿದ್ದಾರೆ.
ಇದೇ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಕುರಿತಂತೆ ರಾಜ್ಯಪಾಲರು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಈ ರೀತಿ ಹೇಳಿಕೆ ನೀಡಿದ್ದು ಸರಿಯೇ ಎಂದು ಮುಖ್ಯ ಕಾರ್ಯದರ್ಶಿಗೆ ಪ್ರಶ್ನಿಸಿದ್ದಾರೆ.

ಕಳೆದ 4 ದಿನಗಳಿಂದ ಬೆಂಗಳೂರಿನಲ್ಲಿ ನಡೆದ ಘಟನೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಅದರಲ್ಲೂ ಪರಮೇಶ್ವರ್ ಅತ್ಯಂತ ಹಿರಿಯರು. ಇಂತಹ ಘಟನೆಗಳಿಗೆ ಪಾಶ್ಚಿಮಾತ್ಯ ಸಂಸ್ಕøತಿ ಕಾರಣ ಎಂದು ಹೇಳಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಕಾರ್ಯಾಂಗದ ಮುಖ್ಯಸ್ಥನಾಗಿ ನಾನು ಎಲ್ಲಾ ವಿಷಯಗಳಲ್ಲೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಆದರೆ ಮಹಿಳೆಯರ ಮೇಲೆ ಇಂತಹ ಘಟನೆ ನಡೆದ ವೇಳೆ ಕೈ ಕಟ್ಟಿ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.

ಮೊದಲು ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡಲು ಸರ್ಕಾರ ಮುಂದಾಗಬೇಕು. ನೊಂದ ಮಹಿಳೆಯರಿಗೆ ಸಾಂತ್ವನ ಹೇಳಬೇಕು. ಮನಸೋ ಇಚ್ಛೆ ಹೇಳಿಕೆ ನೀಡಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವುದರ ಜತೆಗೆ ರಾಜ್ಯದ ಮರ್ಯಾದೆಯನ್ನು ಹರಾಜು ಹಾಕಬೇಡಿ. ಮೊದಲು ಘಟನೆ ಕುರಿತಂತೆ ಸಂಪೂರ್ಣ ವಿವರವನ್ನು ನೀಡಿ ಎಂದು ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವರು ಕೂಡ ಈ ಘಟನೆ ಕುರಿತಂತೆ ಆತಂಕ ವ್ಯಕ್ತಪಡಿಸಿದ್ದಾರೆ. ಸ್ವತಃ ರಾಜನಾಥ್ ಸಿಂಗ್ ಅವರೇ ಮಾಧ್ಯಮವೊಂದರಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುವುದರ ಬದಲು ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಮುಖ್ಯಮಂತ್ರಿ ಜತೆ ಮಾತನಾಡಬೇಕಿತ್ತು. ಆದರೆ ಸಚಿವ ಮಹದೇವ ಪ್ರಸಾದ್ ಹಠಾತ್ ನಿಧನರಾಗಿದ್ದು , ಅವರ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿರುವುದರಿಂದ ಚರ್ಚಿಸಲು ಸಾಧ್ಯವಾಗಿಲ್ಲ. ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಕಾನೂನು ಸುವ್ಯವಸ್ಥೆ ವಿಭಾಗ ಸೇರಿದಂತೆ ಎಲ್ಲರ ಜತೆ ಚರ್ಚಿಸಿ ವರದಿ ನೀಡಬೇಕು.
ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು, ಮಹಿಳೆಯರು ಮುಕ್ತವಾಗಿ ಸಂಚರಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಯಾರೇ ಆಗಲಿ ಎಷ್ಟೇ ಪ್ರಭಾವಿಗಳಾಗಿರಲಿ ಇಂತಹ ಸಮಾಜಘಾತುಕರನ್ನು ಮಟ್ಟ ಹಾಕಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲು ಮುಂದಾಗುವಂತೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin