ಹೊಸ 2000 ಮುಖಬೆಲೆಯ ನೋಟು ಬ್ಯಾನ್ ಆಗಲಿದೆಯೇ..? ನಿಮ್ಮ ಎಲ್ಲ ಅನುಮಾನಗಳಿಗೆ ಇಲ್ಲಿದೆ ನೋಡಿ ಉತ್ತರ

ಈ ಸುದ್ದಿಯನ್ನು ಶೇರ್ ಮಾಡಿ

2000-Notes

ನವದೆಹಲಿ. ಡಿ.13 : 500/1000 ನೋಟುಗಳು ಬ್ಯಾನ್ ಆಗಿ ಈಗ ತಾನೇ ಹೊಸ 500 ಮತ್ತು 2000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುತ್ತಿವೆ. ಇನ್ನೂ ಎಷ್ಟೋ ಜನರು ಹೊಸ 500/ 2000 ನೋಟುಗಳನ್ನು ನೋಡೇ ಇಲ್ಲಾ. ಆಗಲೇ ಇನ್ನೊಂದು ಸುದ್ದಿ ಭಾರಿ ಸದ್ದು ಮಾಡುತ್ತಿದೆ.  ಹೊಸದಾಗಿ ಚಲಾವಣೆಗೆ ಬಂದ 2000 ಮುಖಬೆಲೆಯ ನೋಟಿನ ಆಯಸ್ಸು ಎಷ್ಟು..? ಈ ನೋಟು ಸದ್ಯದಲ್ಲೇ ಬ್ಯಾನ್ ಆಗಲಿದೆಯೇ..? ಈ ನೋಟುಗಳನ್ನು ತಾತ್ಕಾಲಿಕ ಚಲಾವಣೆಗೆಂದೇ ಮುದ್ರಿಸಲಾಗಿದೆಯೇ ..? ಹೌದು, ಈ ರೀತಿಯ ಪ್ರಶ್ನೆಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿವೆ. ಇದಕ್ಕೆ ಕಾರಣ 2000 ಮುಖಬೆಲೆಯ ನೋಟು ಸದ್ಯದಲ್ಲೇ ಬ್ಯಾನ್ ಆಗಲಿದೆ ಎಂಬ ಸುದ್ದಿ ವಾಟ್ಸಾಪ್, ಫೇಸ್ಬುಕ್ , ಟ್ವಿಟ್ಟರ್ ಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಭಾರತೀಯ ಜನತಾ ಪಕ್ಷದ ಮಾತೃಸಂಸ್ಥೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಆರ್ಥಿಕ ಚಿಂತಕ ಎಸ್‌.ಗುರುಮೂರ್ತಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದು. ಅವರ ಪ್ರಕಾರ ಐದು ವರ್ಷಗಳಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ಕೂಡಾ ರದ್ದಾಗಲಿದೆ. ಇಂಗ್ಲೀಷ್‌ ಸುದ್ದಿವಾಹಿನಿ ಇಂಡಿಯಾ ಟುಡೇಗೆ ನೀಡಿರುವ ಸಂದರ್ಶನದಲ್ಲಿ ಹಂಚಿಕೊಂಡಿರುವ ಈ ಅಭಿಪ್ರಾಯ ಈಗ ಹೊಸ ಸಂಚಲನ ಉಂಟು ಮಾಡಿದೆ.

ಖ್ಯಾತ ಲೆಕ್ಕಪರಿಶೋಧಕರೂ ಆಗಿರುವ ಗುರುಮೂರ್ತಿ ಅವರ ಪ್ರಕಾರ ಐನೂರು ರೂಪಾಯಿ ನೋಟೇ ಅತೀ ದೊಡ್ಡ ಮುಖಬೆಲೆಯ ನೋಟಾಗಲಿದೆ. ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ತಾತ್ಕಾಲಿಕವಷ್ಟೇ. ಸರ್ಕಾರಿ ಮುದ್ರಣಾಲಯಗಳಲ್ಲಿ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳನ್ನು ಮುದ್ರಿಸಲು ಸಾಧ್ಯವಿಲ್ಲದ ಕಾರಣ ಆ ಅಂತರವನ್ನು 2 ಸಾವಿರ ರೂಪಾಯಿ ನೋಟುಗಳ ಮೂಲಕ ತುಂಬಲಾಗಿದೆ ಎನ್ನುತ್ತಾರೆ ಗುರುಮೂರ್ತಿ.

ಗುರುಮೂರ್ತಿಯವರ ಈ ಅಭಿಪ್ರಾಯ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಅಕ್ರಮವಾಗಿ ಕೂಡಿಟ್ಟಿರುವ ಹಳೆ ನೋಟನ್ನು ಹೊಸ ನೋಟಿಗೆ ಪರಿವರ್ತಿಸಿಕೊಂಡು ಬಳಿಕ ಮತ್ತೆ ತೆರಿಗೆ ವಂಚಿಸಬಹುದು ಎಂಬ ಊಹೆಯಲ್ಲಿರುವ ಮಂದಿಗೆ ಈ ಹೇಳಿಕೆ ಆಘಾತ ನೀಡಿದರೂ ಅಚ್ಚರಿಯೇನಿಲ್ಲ.

ಈ ಕುರಿತು ವೆಂಕಯ್ಯ ನಾಯ್ಡು ಹೇಳಿದ್ದೇನು..?

ಹೊಸ 2000 ಮುಖಬೆಲೆಯ ನೋಟು ಕೂಡ ಬ್ಯಾನ್ ಆಗಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಇದು ಗುರುಮೂರ್ತಿಯವರ ಅಭಿಪ್ರಾಯವಷ್ಟೇ, ಈ ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ, ಅದೇ ರೀತಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡದಿಸಿದ್ದಾರೆ ಅಷ್ಟೇ, ಆದರೆ ಹೊಸ 2000 ನೋಟ್ ಬ್ಯಾನ್ ಮಾಡುವ ಯೋಚನೆ ಸದ್ಯಕ್ಕೆ ಸರ್ಕಾರದೆದುರಿಗೆ ಇಲ್ಲ ಎಂದಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin