‘ಹೋಟೆಲ್‍ ಊಟ ತರಿಸಿ ದಲಿತರ ಮನೆಯಲ್ಲಿ ಊಟ ಮಾಡುವ ನಾಟಕವಾಡಿದ ಬಿಜೆಪಿಯವರಿಗೆ ನಾಚಿಕೆಯಾಗಬೇಕು’

ಈ ಸುದ್ದಿಯನ್ನು ಶೇರ್ ಮಾಡಿ

Siddaramiaha--01

ಬೆಂಗಳೂರು, ಮೇ 21- ಹೋಟೆಲ್‍ನಲ್ಲಿ ಊಟ ತರಿಸಿ ದಲಿತರ ಮನೆಯಲ್ಲಿ ಊಟ ಮಾಡಿ ನಾಟಕವಾಡಿದ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಇಂತಹ ಅವಮಾನಗಳು ದಲಿತ ಸಮುದಾಯಕ್ಕೆ ಅರ್ಥವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದರು. ಕಾಂಗ್ರೆಸ್ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ದಿ.ರಾಜೀವ್‍ಗಾಂಧಿ ಅವರ 27ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸೌದದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋ ಟೋ ಹೊರ ಹಾಕಿ ಅವಮಾನಿಸಿದರು. ಈಗ ಹೋಟೆಲ್‍ನಿಂದ ತಿಂಡಿ ತರಿಸಿ ದಲಿತರ ಮನೆಯಲ್ಲಿ ತಿಂದು ದಲಿತರ ಮನೆಯಲ್ಲಿ ಊಟ ಮಾಡಿದ್ದೇವೆ ಎಂದು ಸಂಭ್ರಮಿಸುವ ನಾಟಕವಾಡಿದ್ದಾರೆ ಎಂದು ಆರೋಪಿಸಿದರು.ಈ ಹಿಂದೆ ಇಂದಿರಾಗಾಂಧಿ ಅವರು ದಲಿತರ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆಎಲೆಯಲ್ಲಿ ಊಟ ಮಾಡಿ ನೈಜ ಕಾಳಜಿ ತೋರಿಸಿದ್ದರು. ಇಂದು ಬಿಜೆಪಿಯವರು ಹೋಟೆಲ್‍ನಿಂದ ತಂದ ತಿಂಡಿಯನ್ನು ಟೇಬಲ್ ಮೇಲೆ ಕುಳಿತು ತಿಂದು ನಾಟಕವಾಡಿದ್ದಾರೆ. ಇದು ಮತ್ತೊಮ್ಮೆ ದಲಿತ ಸಮುದಾಯಕ್ಕೆ ಮಾಡಿದ ಅಪಮಾನ. ಇದು ದಲಿತ ಸಮುದಾಯಕ್ಕೆ ಅರ್ಥವಾಗುತ್ತದೆ ಎಂದರು.  ಕಾಂಗ್ರೆಸ್‍ನವರು ದಿನದ 24ಗಂಟೆಯೂ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಶೋಷಿತರ ಜತೆಯಲ್ಲೇ ಇದ್ದಾರೆ. ನಾವು ಎಂದೂ ಸಂಭ್ರಮ ಆಚರಿಸಿಕೊಂಡಿಲ್ಲ. ಬಿಜೆಪಿಯವರು ಒಂದು ದಿನ ದಲಿತರ ಮನೆಯಲ್ಲಿ ಊಟ ಮಾಡಿ ಅದನ್ನು ಸಂಭ್ರಮಿಸಿದ್ದಾರೆ. ಕೊನೆಗೂ ಅವರ ನಾಟಕ ಬಯಲಾಗಿದೆ ಎಂದು ಪರಮೇಶ್ವರ್ ಕಿಡಿಕಾರಿದರು.

ದೇಶದಲ್ಲಿ ಕಾಂಗ್ರೆಸಿನಷ್ಟು ದೊಡ್ಡ ಸಂಖ್ಯೆಯ ಸದಸ್ಯರನ್ನು ಬೇರೆ ಯಾವ ಪಕ್ಷವೂ ಹೊಂದಿಲ್ಲ. ಅಂತಹ ಪಕ್ಷವನ್ನು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ ಇದು ಸಾಧ್ಯವೇ ಇಲ್ಲ ಎಂದರು.  ಇತ್ತೀಚಿಗೆ ಯುವ ಕಾಂಗ್ರೆಸ್‍ನಿಂದ ಬಜರಂಗದಳವರಿಗೆ ಸದಸ್ಯತ್ವ ಕೊಟ್ಟ ಆರೋಪ ಕೇಳಿ ಬಂದಿದೆ. ಹುಷಾರ್…! ಇಂತಹದ್ದನ್ನೆಲ್ಲಾ ಮಾಡಬೇಡಿ ಎಚ್ಚೆತ್ತುಕೊಳ್ಳಿ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಬಗೆಹರಿಸಿಕೊಳ್ಳಬೇಕೇ ಹೊರತು ಬಡಿದಾಡಿಕೊಳ್ಳಬಾರದು. ಬಿಜೆಪಿ-ಜೆಡಿಎಸ್ ವಿರುದ್ಧ ಹೋರಾಟ ಮಾಡಬೇಕೆಂದು ಕಿವಿಮಾತು ಹೇಳಿದರು.

ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುವುದರ ವಿರುದ್ಧ ಹೋರಾಟ ಮಾಡಬೇಕಿದೆ. ಕರ್ನಾಟಕದ ಮೂಲಕ ದೇಶದಲ್ಲಿ ಮತ್ತೆ ಕಾಂಗ್ರೆಸ್‍ಅನ್ನು ಪ್ರತಿಷ್ಠಾಪಿಸುವ ಮೂಲಕ ಬಿಜೆಪಿ ಅಜೆಂಡಾವನ್ನು ಸೋಲಿಸಬೇಕಿದೆ ಎಂದು ತಿಳಿಸಿದರು.  ಯುಪಿಎ ಸರ್ಕಾರ 10 ವರ್ಷದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಆರ್ಥಿಕವಾಗಿ ಹಿಡಿಗಂಟು ಮಾಡಿ ಮೋದಿಯ ಕೈಗಿಟ್ಟು ಹೋಗಿದೆ. ಈಗ ಅದನ್ನು ಖರ್ಚು ಮಾಡಿಕೊಂಡು ದೇಶ ಸುತ್ತುತ್ತಿರುವ ಮೋದಿ ಎಲ್ಲವನ್ನೂ ತಾವೇ ಸಾಧನೆ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಯುಪಿಎ ಅಧಿಕಾರ ಕಳೆದುಕೊಂಡ 15 ದಿನದಲ್ಲಿ ಮಂಗಳಯಾನ ನಡೆಯಿತು. ಅದಕ್ಕೆ ಬೆಂಗಳೂರಿಗೆ ಬಂದ ಮೋದಿ ವಿಜಯಸಂಕೇತವಾದ ಹೆಬ್ಬರಳನ್ನು ತೋರಿಸಿ ಫೋಸುಕೊಟ್ಟರು ಎಂದರು.

ನಿನ್ನೆ ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಾನಿಟರಿಂಗ್ ಪ್ರಿನ್ಸಿಪಲ್ ಸಮ್ಮೇಳನ ನಡೆಯಿತು. ಅದರಲ್ಲಿ ಭಾರತ ಭಾಗವಹಿಸಿಲ್ಲ ಎಂಬುದೇ ದೊಡ್ಡ ಸುದ್ದಿಯಾಗಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಭಾರತ ಗುರುತಿಸಿಕೊಂಡಿದೆ. ಅದಕ್ಕೆ 54 ವರ್ಷಗಳ ಕಾಂಗ್ರೆಸ್‍ನ ಆಡಳಿತವೇ ಕಾರಣ ಎಂದು ತಿಳಿಸಿದರು.
ಸಂಪರ್ಕ ಸಾಧನ, ಮಾಹಿತಿ ತಂತ್ರಜ್ಞಾನ, ಆಹಾರ ಭದ್ರತೆಯಲ್ಲಿ ಇಂದು ಭಾರತ ಅತ್ಯದ್ಭುತವನ್ನು ಸಾಧಿಸಿದೆ. ಅದಕ್ಕೆ ರಾಜೀವ್‍ಗಾಂಧಿ ಅವರ ಕನಸು, ಕಲ್ಪನೆ ಕಾರಣವಾಗಿದೆ. ರಾಜೀವ್‍ಗಾಂಧಿ ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ನಾವು ಭವ್ಯ ಭಾರತವನ್ನು ಕಟ್ಟಬೇಕು. ಯುವಕರು ಪ್ರತೀ ಕ್ಷಣವೂ ರಾಜೀವ್‍ಗಾಂಧಿ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತಿರುವ ಬಿಜೆಪಿ ಅಜೆಂಡಾವನ್ನು ಸೋಲಿಸಲು ಕರೆ ನೀಡಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಮಧು ಯಕ್ಷಿಗೌಡ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಮುಖಂಡರಾದ ನಾರಾಯಣಸ್ವಾಮಿ, ರಾಣಿಸತೀಶ್, ಆರ್.ಕೃಷ್ಣಪ್ಪ, ಛಲವಾದಿ ನಾರಾಯಣಸ್ವಾಮಿ, ಪಿ.ರಮೇಶ್, ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಬಿ.ಶೇಖರ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin