ಹೋರಾಟಗಾರನ್ನು ಜೈಲಿನಿಂದ ಹೊರ ಕರೆತರುವ ಹೊಣೆ ನಮ್ಮದು

ಈ ಸುದ್ದಿಯನ್ನು ಶೇರ್ ಮಾಡಿ

narayana-gowda
ಹೋರಾಟಗಾರರನ್ನು ಜೀವನವಿಡೀ ಜೈಲಿನಲ್ಲಿ ಕೊಳೆಯುವಂತೆ ಮಾಡುವುದು, ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡುವುದು ಬೇಡ. ಅವರಿಗೆ ನಾವೆಲ್ಲಾ ನೆರವು ನೀಡಬೇಕು. ಅದಕ್ಕಾಗಿ ಇಂದೇ ಜೈಲಿಗೆ ಭೇಟಿ ನೀಡಿ ಅವರ ಸ್ಥಿತಿಗತಿ ಅರಿತು ಸಹಾಯ ಮಾಡುವುದಾಗಿ ನಾರಾಯಣಗೌಡರು ಅಭಯ ನೀಡಿದ್ದಾರೆ. ಅವರ ಕುಟುಂಬಸ್ಥರು, ಪೋಷಕರು ಅಧೀರರಾಗುವುದು ಬೇಡ. ಯಾವುದೇ ಸಂದರ್ಭದಲ್ಲಿ ನಮ್ಮನ್ನು, ನಮ್ಮ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಸಂಪರ್ಕಿಸಿ ಎಂದು ಅವರು ತಿಳಿಸಿದ್ದಾರೆ.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ನೀಡಿದ ತೀರ್ಪು ವಿರೋಧಿಸಿ ಸೆ.9 ರಂದು ರಾಜ್ಯ ಬಂದ್‍ಗೆ ಕನ್ನಡ ಪರ ಸಂಘಟನೆಗಳು ಕರೆ ಕೊಟ್ಟಿದ್ದವು.ಸಂಘಟನೆಗಳ ಮುಖಂಡರು, ರಾಜ್ಯದ 1200ಕ್ಕೂ ಹೆಚ್ಚು ಸಂಘಟನೆಗಳು ನಮ್ಮ ಬಂದ್‍ಗೆ ಬೆಂಬಲ ಘೋಷಿಸಿವೆ ಎಂದು ಪ್ರಕಟಿಸಿದ್ದವು. ಬಂದ್ ಯಶಸ್ವಿಯೂ ಆಯಿತು. ನಂತರ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಬೀಸಿದ ಚಾಟಿ ಹೆಚ್ಚುವರಿ ನೀರು ಬಿಡುವಂತೆ ನೀಡಿದ ಆದೇಶ ವಿರೋಧಿಸಿ ಮತ್ತು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಖಂಡಿಸಿ ಸೆ.12 ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸುಮಾರು 300ಕ್ಕೂ ಹೆಚ್ಚು ಕನ್ನಡದ ಕಟ್ಟಾಳುಗಳು ಜೈಲು ಸೇರಿದ್ದಾರೆ. ಇವರನ್ನು ರಕ್ಷಿಸುವ ಹೊಣೆಯನ್ನು ಯಾವ ಸಂಘಟನೆಗಳವರು ತೋರುತ್ತಿಲ್ಲ. ಇವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದರಲ್ಲಿ ವಿದ್ಯಾರ್ಥಿಗಳು, ಗಾರ್ಮೆಂಟ್ಸ್ ನೌಕರರು ಸೇರಿದಂತೆ ದುಡಿದು ತಿನ್ನುವ ಮುಗ್ಧ ಶ್ರಮಿಕರು ಇದ್ದಾರೆ. ಬಂದ್‍ಗೆ ಕರೆ ಕೊಟ್ಟ ಯಾವ ಸಂಘಟನೆಗಳೂ ಜೈಲಿಗೆ ಸೇರಿದ ಕನ್ನಡದ ಕುಡಿಗಳ ಬಗ್ಗೆ ಗಮನ ಹರಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಹೋರಾಟಗಾರರ ರಕ್ಷಣೆಗೆ ಮುಂದಾಗಿದ್ದಾರೆ. ರಕ್ಷಣಾ ವೇದಿಕೆಯ ಕಾನೂನು ಘಟಕದ ವತಿಯಿಂದ ಜೈಲಿನಲ್ಲಿರುವವರ ಪರವಾಗಿ ಕಾನೂನು ಹೋರಾಟ ಮಾಡಿ ಅವರನ್ನು ಜೈಲಿನಿಂದ ಹೊರತರಲು ಸಜ್ಜಾಗಿದ್ದಾರೆ.ಇಂದು ಜೈಲಿಗೆ ತೆರಳಿ ಕಾವೇರಿ ಗಲಭೆಯಲ್ಲಿ ಬಂಧಿತರಾಗಿರುವವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಅವರಿಗೆ ಜಾಮೀನು ಕೊಡಿಸಿ ಬಿಡುಗಡೆಗೊಳಿಸುವ  ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಮಹದಾಯಿ ಹೋರಾಟದಲ್ಲಿ 112 ರೈತರನ್ನು ಪೋಲೀಸರು ಬಡಿದು ಬಂಧಿಸಿ ವಿವಿಧ ಜೈಲುಗಳಲ್ಲಿಟ್ಟಾಗ ಇಡೀ ನಾಡೇ ಅವರ ಪರವಾಗಿ ನಿಂತಿತ್ತು. ವಿವಿಧ ಜೈಲುಗಳಿಗೆ ರೈತ ಸಂಘಟನೆಗಳು, ಕನ್ನಡಪರ ಹೋರಾಟಗಾರರು, ಪ್ರಗತಿಪರರು, ಮಠಾಧೀಶರು, ಚಿಂತಕರು, ಸಾಹಿತಿಗಳು, ಭೇಟಿ ನೀಡಿ ಬಂಧಿತರಿಗೆ ಅಭಯ ನೀಡಿದ್ದರು.

ಧಾರವಾಡ ವಕೀಲರ ಸಂಘ ಬಂಧಿತರ ಪರ ವಕಾಲತ್ತು ವಹಿಸಿತ್ತು. ಸರ್ಕಾರ ರೈತರ ವಿರುದ್ಧ ಯಾವುದೇ ಆಕ್ಷೇಪಣೆ ಸಲ್ಲಿಸದ ಕಾರಣ ಅವರಿಗೆ ಸುಲಭವಾಗಿ ಜಾಮೀನು ದೊರೆತಿತ್ತು. ಆದರೆ ಅದೇ ರೀತಿ ಜೀವಜಲಕ್ಕಾಗಿ ಬೀದಿಗಿಳಿದು ಹೋರಾಟ ಮಾಡಿದ ಸುಮಾರು 312 ಜನ. ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇವರಲ್ಲಿ ಹಲವರು ದುಷ್ಕ೦ತ್ಯ ಮಾಡಿರಬಹುದು. ಇದನ್ನು ನಾವು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಬಹುತೇಕ ಅಮಾಯಕರು ಮತ್ತು ಶ್ರಮಜೀವಿಗಳು ಬಂಧಿತರಾಗಿದ್ದಾರೆ. ಅವರ ಪರವಾಗಿ ಎಲ್ಲರೂ ನಿಲ್ಲಬೇಕಾಗಿರುವುದು ಅಗತ್ಯ. ಅಲ್ಲದೇ ಅದು ಕರ್ತವ್ಯವೂ ಆಗಿದೆ.ಈ ನಿಟ್ಟಿನಲ್ಲಿ ಜನ್ಮಭೂಮಿ ಫೌಂಡೇಶನ್ ವತಿಯಿಂದ ವಕೀಲರಾದ ನಟರಾಜ್ ಶರ್ಮಾ ಅವರ ನೇತೃತ್ವದ 22 ವಕೀಲರ ತಂಡ ಉಚಿತವಾಗಿ ವಕಾಲತ್ತು ವಹಿಸಲು ಮುಂದೆ ಬಂದಿದೆ ಇದು ಕೂಡ ಸ್ವಾಗತಾರ್ಹ.

ಈಗ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬಂಧಿತರ ರಕ್ಷಣೆಗೆ ಮುಂದಾಗಿದೆ. ಅಮಾಯಕ ಕನ್ನಡಿಗರ ಪರವಾಗಿ, ಕನ್ನಡದ ಮಕ್ಕಳ ರಕ್ಷಣೆಗೆ ನಾವಿದ್ದೇವೆ. ಅವರ ಪೋಷಕರು, ಅವರ ಕುಟುಂಬದವರು ನಮ್ಮನ್ನು ಭೇಟಿ ಮಾಡಿದರೆ ನಮ್ಮ ಕಾನೂನು ಘಟಕ ನಿಮಗೆ ನೆರವು ನೀಡಲಿದೆ. ನೀವು ಜೀವಜಲಕ್ಕಾಗಿ ಹೋರಾಟ ಮಾಡಿದ್ದೀರಿ. ನಿಮ್ಮನ್ನು ರಕ್ಷಣೆ ಮಾಡುವ ಹೊಣೆ ನಮ್ಮದು. ಕೇವಲ ಹೋರಾಟಕ್ಕೆ ಕರೆ ನೀಡಿ ಅರ್ಧ ದಾರಿಯಲ್ಲಿ ಕೈಬಿಡುವ ಜಾಯಮಾನ ನಮದಲ್ಲ ಎಂದು ಅವರು ಈ ಸಂಜೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸುತ್ತಾ ಜನತೆಗೆ ಅಭಯ ನೀಡಿದ್ದಾರೆ.ರಾಜ್ಯದಲ್ಲಿ ಸಾವಿರಾರು ಕನ್ನಡ ಪರ ಸಂಘಟನೆಗಳು ಇವೆ. ಕೆಲವೊಂದು ಸಂಘಟನೆಗಳು ಬದ್ಧತೆಯಿಂದ ಕೆಲಸ ಮಾಡುತ್ತಿವೆ.

ಬಹುತೇಕ ಸಂಘಟನೆಗಳು ರಿಯಲ್ ಎಸ್ಟೇಟ್ ಮಾಫಿಯಾಗಳ ರಕ್ಷಣೆಗೆ ಮುಂದಾಗಿವೆ. ಬ್ಲ್ಯಾಕ್‍ಮೇಲ್ ಮಾಡುತ್ತಿವೆ. ಲೆಟರ್‍ಹೆಡ್, ವಿಸಿಟಿಂಗ್ ಕಾರ್ಡ್‍ಗಳ ಸಂಘಗಳಾಗಿವೆ. ಇಂತಹವುಗಳಿಂದ ರಾಜ್ಯಕ್ಕಾಗಲಿ, ಹೋರಾಟಗಾರರಿಗಾಗಲಿ ನ್ಯಾಯ ಸಿಗುವುದಿಲ್ಲ. ಬದ್ಧತೆಯಿಂದ ಕೆಲಸ ಮಾಡಬೇಕು. ಈ ನೆಲ, ಜಲ, ನಾಡು, ನುಡಿ, ಭಾಷೆ, ಸಂಸ್ಕೃತಿ ಗೆ ಬದ್ಧತೆಯಿಂದ ಕೆಲಸ ಮಾಡಬೇಕು. ಅಂತಹ ಸಂಘಗಳ ಅಗತ್ಯವಿದೆ. ಕೇವಲ ಪ್ರಚಾರಕ್ಕಾಗಿ ಫೋಸ್ ಕೊಡುವ, ಮೈಕ್ ಮುಂದೆ ಭಾಷಣ, ಘೋಷಣೆ ಮಾಡುವ ಸಂಘಗಳ ಅಗತ್ಯವಿಲ್ಲ ಎಂದು ಗೌಡರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಸೆಪ್ಟೆಂಬರ್ 12 ರಂದು ರಾಜಧಾನಿಯಲ್ಲಿ ನಡೆದ ಹಿಂಸಾಚಾರ ಘಟನೆಗಳಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ಕನ್ನಡ ಪರ ಹೋರಾಟಗಾರರು, ಚಳವಳಿಗಾರರು ಯಾವತ್ತೂ ಕಾನೂನನ್ನು ಕೈಗೆತ್ತಿಕೊಂಡವರಲ್ಲ.

ನಮ್ಮ ಆಕ್ರೋಶ, ಆವೇಶ ಏನಿದ್ದರೂ ಸಾತ್ವಿಕ ಕೋಪಕ್ಕೆ ಸೀಮಿತವಾಗಿರುತ್ತದೆ. ನಮ್ಮ ಸಿಟ್ಟು ಯಾವತ್ತೂ ರಟ್ಟೆಗೆ ಬಂದಿಲ್ಲ. ನಮ್ಮ ಹೋರಾಟ ಕಾನೂನಿನ ಚೌಕಟ್ಟಿನಲ್ಲಿ ನಡೆದಿದೆ ಎಂದು ಅವರು ಸಮರ್ಥಿಸಿಕೊಂಡರು. ಅಂದು ನಡೆದ ಘಟನೆಯಲ್ಲಿ ವೈಯಕ್ತಿಕ ದ್ವೇಷಗಳಿಗೆ ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆದಿದ್ದಾರೆ ಎಂಬ ಅನುಮಾನವಿದೆ. ಕೆಪಿಎಲ್ ಟ್ರಾವೆಲ್ಸ್‍ನವರು ಇನ್ಶೂರೆನ್ಸ್ ಹಣ ಪಡೆಯಲು ತಾವೇ ಬಸ್‍ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ಇದೆ. ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಪೋಲೀಸರು ಸಾರ್ವಜನಿಕರ ಮುಂದೆಸತ್ಯವನ್ನುಬಹಿರಂಗಪಡಿಸಬೇಕು. ಬಂಧಿತ ಕನ್ನಡ ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂಬುದು ನನ್ನ ಆಗ್ರಹ ಎಂದು ಸಾರಿದ್ದಾರೆ.

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ನೆಲೆಸಿರುವವರು ಸಾಕಷ್ಟು ಜನ ಇದ್ದಾರೆ ಇಂದು ಜೈಲು ಪಾಲಾಗಿರುವವರು ಬಡ ಹಾಗೂ ಮಧ್ಯಮವರ್ಗದವರು. ಅವರನ್ನು ಈವರೆಗೆ ರೈತ ಸಂಘಟನೆಗಳಾಗಲಿ, ಕಾವೇರಿ ಪರವಾಗಿ ಉದ್ದುದ್ದ ಭಾಷಣ ಮಾಡುವವರಾಗಲಿ, ಪ್ರಗತಿಪರರಾಗಲಿ, ಮಠಾಧೀಶರಾಗಲಿ ಯಾರೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಇದನ್ನು ನಾವೇ ಪ್ರಾರಂಭಿಸುತ್ತೇವೆ. ಯಾರನ್ನೂ ನಾವು ದೂಷಿಸುವುದಿಲ್ಲ. ಎಲ್ಲರೂ ಸಂತ್ರಸ್ತರ ನೆರವಿಗೆ ಬರಬೇಕೆಂದು ಮನವಿ ಮಾಡುತ್ತೇವೆ. ನಾವು ತಮಿಳುನಾಡು ವಿರೋಧಿಗಳಲ್ಲ. ಒಕ್ಕೂಟ ವ್ಯವಸ್ಥೆಗೆ ಗೌರವ ಕೊಡುವವರು. ಒಕ್ಕೂಟದ ವ್ಯವಸ್ಥೆಯಲ್ಲಿ ನಾವು ಎಲ್ಲರನ್ನು ಗೌರವಿಸುತ್ತೇವೆ, ಆದರೆ ಭಾಷೆ, ಸಂಸ್ಕೃತಿ  ವಿಷಯದಲ್ಲಿ ರಾಜೀ ಇಲ್ಲ. ಹೊರಗಡೆಯಿಂದ ಬಂದವರು ನಮ್ಮ ಭಾಷೆ, ಸಂಸ್ಕೃತಿ ಗೆ ಹೊಂದಿಕೊಂಡು ಹೋಗಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ರಾಜ್ಯದಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಸಂದರ್ಭದಲ್ಲಿ ಹೋರಾಟ ಮಾಡಲು ಮುಂದಾದಾಗ ಮುನ್ನೆಚ್ಚರಿಕೆಯಾಗಿ ಕಾರ್ಯಕ್ರಮದ ಒಂದು ವಾರ ಮುಂಚೆ 900 ಮಂದಿ ನಮ್ಮ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಲಾಗಿತ್ತು.

ಅವರೆಲ್ಲರಿಗೂ ನಮ್ಮ ಸಂಘಟನೆ ವಿವಿಧ ಪದಾಧಿಕಾರಿಗಳ ಆಸ್ತಿ, ಮನೆ, ಒಡವೆ ಪತ್ರಗಳನ್ನು ಅಡವಿಟ್ಟು ಸುಮಾರು 30 ಲಕ್ಷ ರೂ. ವೆಚ್ಚ ಮಾಡಿ ಜಾಮೀನು ಕೊಡಿಸಿ ಜೈಲಿನಿಂದ ಬಿಡುಗಡೆ ಮಾಡಿಸಿದ್ದೆವು ಎಂದು ಅವರು ಉದಾಹರಣೆ ನೀಡಿದ್ದಾರೆ. ಆ ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರು ಇನ್ನೂ ಅಲೆದಾಡುತ್ತಿದ್ದಾರೆ. ಈಗಲೂ ಕೂಡ ಕಾವೇರಿಗಾಗಿ ಹೋರಾಟ ಮಾಡಿದವರನ್ನು ನಾವು ಬಿಡಿಸಿಕೊಳ್ಳಬೇಕು. ಯಾರು ಏನು ಬೇಕಾದರೂ ಅಂದುಕೊಳ್ಳಲಿ. ಜೈಲಿಗೆ ಭೇಟಿ ನೀಡಿ ಅವರ ನೋವು ಏನೆಂದು ತಿಳಿದುಕೊಂಡು ಅವರನ್ನು ಹೊರಗೆ ತರುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ಅವರು ದೃಢ ಸಂಕಲ್ಪದಿಂದ ಹೇಳಿದ್ದಾರೆ. ಹಣವಂತರು ಬೀದಿಗೆ ಬರುವುದಿಲ್ಲ, ಪ್ರತಿಭಟಿಸುವುದಿಲ್ಲ. ಪ್ರತಿಭಟಿಸುವವರು ಜೈಲಿಗೆ ಹೋದರೆ ಮುಂದೆ ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರತಿಭಟಿಸುವವರು ಯಾರು? ಅದಕ್ಕಾಗಿ ನಾವು ಹೋರಾಟಗಾರರನ್ನು ರಕ್ಷಣೆ ಮಾಡಬೇಕಾಗಿದೆ. ಅದನ್ನು ನಾವು ಮಾಡುತ್ತೇವೆ. ರಾಜಕಾರಣಿಗಳ ಬಗ್ಗೆ ಜನರಿಗೆ ನಂಬಿಕೆ ಕಳೆದುಹೋಗಿದೆ.

ಅವರು ಸ್ವಾರ್ಥಕ್ಕಾಗಿ ತಮ್ಮ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಧರ್ಮ, ಜಾತಿ ಹೆಸರಿನಲ್ಲಿ ಬೀದಿಗಿಳಿದು ಹೋರಾಟ ಮಾಡುವ ಅವರು ನೆಲ, ಜಲ, ಭಾಷೆ, ಸಂಸ್ಕೃತಿ  ವಿಷಯದಲ್ಲಿ ಯಾವುದೇ ಬದ್ಧತೆ ಪ್ರದರ್ಶಿಸದಿರುವುದು ದುರದೃಷ್ಟಕರ ಎಂದು ನಾರಾಯಣಗೌಡರು ಬೇಸರದಿಂದ ನುಡಿದರು. ಮಹದಾಯಿ, ಕಾವೇರಿ, ಕೃಷ್ಣಾ ಎಲ್ಲಾ ವಿಷಯಗಳಲ್ಲೂ ರಾಜಕಾರಣಿಗಳು ಆರಂಭ ಶೂರತ್ವ ತೋರಿದ್ದಾರೆಯೇ ಹೊರತು ಕೊನೆಗೆ ಹೈಕಮಾಂಡ್ ಸಂಸ್ಕೃತಿ  ಮಣಿದು ರಾಜ್ಯಕ್ಕೆ ಅನ್ಯಾಯ ಮಾಡಿರುವುದೇ ಅವರ ಸಾಧನೆಯಾಗಿದೆ. ಯಾರೂ ಕೂಡ ಜನರ ಪರವಾಗಿ ನಿಂತಿಲ್ಲ. ನೆಲ, ಜಲದ ವಿಷಯದಲ್ಲಿ ನಿರಂತರ ಅನ್ಯಾಯವಾಗಲು ಜನಪ್ರತಿನಿಧಿಗಳೇ ನೇರ ಕಾರಣ ಎಂದು ಅವರು ಪುನರುಚ್ಚರಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin