ಹೋರಾಟಗಾರರ ಮೇಲಿನ ಕೇಸ್ ಗಳನ್ನು ಸರ್ಕಾರ ಕೂಡಲೇ ಹಿಂಪಡೆಯಲಿ : ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

HDD

ಬೆಂಗಳೂರು,ಆ.15– ಮಹದಾಯಿಗಾಗಿ ಹೋರಾಟ ನಡೆಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರೈತರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕೆಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಒತ್ತಾಯಿಸಿದರು.  ಜೆಡಿಎಸ್ ಕಚೇರಿಯಲ್ಲಿ ನಡೆದ 70ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಆಸ್ತಿಪಾಸ್ತಿಗೆ ನಷ್ಟ ಮಾಡಿಲ್ಲ. ಅಂತಹವರ ವಿರುದ್ಧ ಹೂಡಿರುವ ಮೊಕದ್ದಮೆಗಳನ್ನ ವಾಪಸ್ ಪಡೆಯಬೇಕು. ಒಳ್ಳೆಯ ವಾತಾವರಣ ಸೃಷ್ಟಿಮಾಡಿ, ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು ಎಂದರು.  ನೆಲ, ಜಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಬೇಡ. ಈ ವಿಚಾರದಲ್ಲಿ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳ ನಡುವೆ ಆಗಾಗ್ಗೆ ವಿವಾದಗಳು ತಲೆದೋರುತ್ತಿರುವುದು ಸಾಮಾನ್ಯವಾಗಿದೆ. ಇದನ್ನು ಒಗ್ಗಟ್ಟಿನಿಂದ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಅವಕಾಶಬೇಡ:
ದೇಶದಲ್ಲಿ ಕೆಲವು ವಿಚಿತ್ರಕಾರಿ ಶಕ್ತಿಗಳು ತಲೆ ಎತ್ತುತ್ತಿವೆ. ನೆರೆಯ ರಾಷ್ಟ್ರಗಳು ಇಂತಹ ಅವಕಾಶಕ್ಕಾಗಿ ಹವಣಿಸುತ್ತಿವೆ. ಅಂತಹ ಶಕ್ತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅವಕಾಶ ಕೊಡಬಾರದು. ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಯಾವುದೇ ಶಕ್ತಿಗಳಿಗೆ ಅವಕಾಶ ನೀಡಬಾರದು ಎಂದರು.  ರಾಷ್ಟ್ರಕಟ್ಟುವ ಕೆಲಸದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಪೌಷ್ಠಿಕತೆ ಸೇರಿದಂತೆ ನೂರಾರು ಸಮಸ್ಯೆಗಳು ದೇಶವನ್ನು ಕಾಡುತ್ತಿವೆ. ಮಾಜಿ ಪ್ರಧಾನಿ ದಿ ಪಂಡಿತ್ ಜವಹರಲಾಲ್ ನೆಹರೂ ಕಾಲದಿಂದಲೂ ಸಾಕಷ್ಟು ಕೊಡುಗೆ ನೀಡುತ್ತಿದ್ದರೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಗಾಂಧಿ ಅವರ ಮಾರ್ಗದರ್ಶನ, ತ್ಯಾಗ, ಬಲಿದಾನಗಳ ಮೂಲಕ ಸ್ವಾತಂತ್ರ್ಯ ದೊರೆತಿದೆ. ಹಾಗಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರನ್ನೂ ಸ್ಮರಿಸಬೇಕು ಎಂದ ಅವರು, ಗ್ರಾಮ ಪಂಚಾಯ್ತಿಯಿಂದ ದೆಹಲಿಯ ಸಂಸತ್‍ವರೆಗೂ ಎಲ್ಲಾ ಹಂತಗಳಲ್ಲೂ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ವಿಷಯದಲ್ಲಿ ಪ್ರತಿಕ್ರಿಯೆ ನೀಡಲು ದೇವೇಗೌಡರು ನಿರಾಕರಿಸಿದರು.

ಇದಕ್ಕೂ ಮುನ್ನ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್, ಎಲ್ಲ ರಾಜಕೀಯ ಪಕ್ಷಗಳಲ್ಲೂ ಹಣ ಇರುವವರಿಗೆ ಮಾತ್ರ ಮಣೆ ಹಾಕಲಾಗುತ್ತದೆ. ಇದು ತಪ್ಪಬೇಕು. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುವ ಕೆಲಸ ರಾಜಕೀಯ ಪಕ್ಷಗಳಿಂದ ಆಗಬೇಕು. ಅದೇ ರೀತಿ ಪಕ್ಷದಲ್ಲಿ ಶಿಸ್ತು, ಶ್ರಮ, ಜನಸಂಪರ್ಕಕ್ಕೆ ಒತ್ತು ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.  ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ವಿಧಾನಪರಿಷತ್ ಸದಸ್ಯ ಶರವಣ, ಬೆಂಗಳೂರು ಮಹಾನಗರ ಜೆಡಿಎಸ್ ಘಟಕ ಅಧ್ಯಕ್ಷ ರತನ್‍ಸಿಂಗ್ ಸೇರಿದಂತೆ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin