ಹಳ್ಳಿ ಹಕ್ಕಿ ಒಂಟಿ ಅಲ್ಲ: ಸಚಿವ ಬಿ.ಸಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಫೆ.8- ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ನೂತನ ಸಚಿವ ಬಿ.ಸಿ.ಪಾಟೀಲ್ ಇಂದಿಲ್ಲಿ ತಿಳಿಸಿದರು. ಸಿದ್ದಗಂಗಾ ಮಠಕ್ಕೆ ಆಗಮಿಸಿದ ಅವರು ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸಿದ್ದಗಂಗಾ ಸ್ವಾಮೀಜಿ ಅವರ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಮತ್ತು ನಮ್ಮ ನಾಯಕ ಯಡಿಯೂರಪ್ಪ ಅವರು ನನಗೆ ಯಾವ ಖಾತೆ ಕೊಡುತ್ತಾರೋ ಅದನ್ನು ನಿಭಾಯಿಸುತ್ತೇನೆ. ನನಗೆ ಇಂಥದ್ದೇ ಖಾತೆ ಬೇಕೆಂದು ಒತ್ತಾಯ ಮಾಡಿಲ್ಲ, ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು ರಮೇಶ್ ಜಾರಕಿಹೊಳಿ ನಮ್ಮ ನಾಯಕ ಎಂದು ಎಲ್ಲೂ ಹೇಳಿಲ್ಲ. ನಾವೆಲ್ಲರೂ ಸ್ನೇಹಿತರು ಮೈತ್ರಿ ಸರ್ಕಾರದ ದುರಾಡಳಿತದಿಂದ ನಾವೆಲ್ಲರೂ ಸಮಾನ ಮನಸ್ಕರಾಗಿ ಹೊರಬಂದೆವು ಎಂದು ಹೇಳಿದರು.

ಹಳ್ಳಿ ಹಕ್ಕಿ ಒಂಟಿ ಅಲ್ಲ: ಹಳ್ಳಿ ಹಕ್ಕಿ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಆಗಲಿ, ಮಹೇಶ್ ಕುಮಟಳ್ಳಿ, ಶಂಕರ್ ಸೇರಿದಂತೆ ಯಾರೂ ಕೂಡ ಒಂಟಿಯಲ್ಲ. ನಾವೆಲ್ಲರೂ ಜೊತೆಯಾಗಿದ್ದೇವೆ. ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಮೂರುವರೆ ವರ್ಷಗಳ ಕಾಲ ಸುಭದ್ರ ಆಡಳಿತ ನಡೆಯಲಿದೆ ಎಂದರು.

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಸರ್ವೋತ್ತೋಮುಖ ಅಭಿವೃದ್ದಿಗೆ ನಾವೆಲ್ಲರೂ ಶ್ರಮಿಸುತ್ತೇವೆ. ನನಗೆ ಶಕ್ತಿ ಎಂದರೆ ಸಿದ್ದಗಂಗಾ ಮಠ. ಡಾ.ಶ್ರೀಶಿವಕುಮಾರ ಸ್ವಾಮೀಜಿ ಅವರ ಆದರ್ಶಗಳು ನನಗೆ ಪ್ರೇರಣೆ ಎಂದರು.  ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಮಸಾಲೆ ಜಯರಾಮ್, ಪಾಲಿಕೆ ಸದಸ್ಯರಾದ ಅರಳೂರು ಕುಮಾರ್, ಸತೀಶ್, ವನಜಾ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.

Facebook Comments