45 ಲಕ್ಷ ರೂ. ಬಿಟ್ಟು 92 ಲಕ್ಷ ದೊಂದಿಗೆ ಕುಟುಂಬ ಸಮೇತ ಚಾಲಕ ಎಸ್ಕೇಪ್ : ವಾಹನ ಪತ್ತೆ

ಬೆಂಗಳೂರು,ನ.24- ಬ್ಯಾಂಕ್ ಮತ್ತು ಎಟಿಎಂಗಳಿಗೆ ತುಂಬಲು ತಂದಿದ್ದ 1.37 ಕೋಟಿ ಹೊಸ ನೋಟಿನೊಂದಿಗೆ ಪರಾರಿಯಾಗಿದ್ದ ಹಣ ವಿಲೇವಾರಿ ವಾಹನದ ಚಾಲಕ 92 ಲಕ್ಷದೊಂದಿಗೆ ಕುಟುಂಬದೊಂದಿಗೆ ನಾಪತ್ತೆಯಾಗಿದ್ದಾನೆ. ನಿನ್ನೆ ಕೆಂಪೇಗೌಡ ರಸ್ತೆಯ ಇಂಡಿಯನ್ ಬ್ಯಾಂಕ್ ಮುಂಭಾಗದಿಂದ 1.37 ಕೋಟಿ ಹೊಸ ನೋಟುಗಳಿದ್ದ ವಾಹನದೊಂದಿಗೆ ಪರಾರಿಯಾಗಿದ್ದ ಚಾಲಕ ಇಂದು ಬೆಳಗ್ಗೆ ವಾಹನವನ್ನು ವಸಂತನಗರದ ಮೌಂಟ್ ಕಾರ್ಮೆಲ್ ಸಮೀಪ ನಿಲ್ಲಿಸಿ ತಲೆಮರೆಸಿಕೊಂಡಿದ್ದಾನೆ. 1.37 ಕೋಟಿ ರೂ.ಗಳಲ್ಲಿ 92 ಲಕ್ಷ ಹಣ ಎಗರಿಸಿಕೊಂಡು ಉಳಿದ ಹಣ ಮತ್ತು ಗನ್ನ್ನು ವಾಹನದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ಈ ವಾಹನವನ್ನು ಪತ್ತೆಹಚ್ಚಿದ ತನಿಖಾ ತಂಡ ಅದರಲ್ಲಿದ್ದ 45 ಲಕ್ಷ ಹಣ ಹಾಗೂ ಗನ್ನ್ನು ವಶಪಡಿಸಿಕೊಂಡು ಆರೋಪಿ ಚಾಲಕನಿಗಾಗಿ ತನಿಖೆ ಚುರುಕುಗೊಳಿಸಿದೆ.
ಲಾಜಿ ಕ್ಯಾಶ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಸೇರಿದ ವಾಹನವನ್ನು ಚಾಲಕ ಡೋಮ್ನಿಕ್ ರಾಯ್ ಚಲಾಯಿಸುತ್ತಿದ್ದನು. ನಿನ್ನೆ ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ಎರಡು ಕೋಟಿ ರೂ. ಕೋಟೆಕ್ ಮಹೀಂದ್ರ ಬ್ಯಾಂಕ್ನಿಂದ 5 ಲಕ್ಷ ರೂ. ಹಣ ತೆಗೆದುಕೊಂಡು ವಿವಿಧ ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಿಗೆ ತುಂಬಲು ಮಧ್ಯಾಹ್ನ 1.30ರಲ್ಲಿ ಮ್ಯಾನೇಜರ್ ಶಿವಕುಮಾರ್, ಸಲೀಂ ಹಾಗೂ ಸಶಸ್ತ್ರ ಕಾವಲು ಸಿಬ್ಬಂದಿ ಜೊತೆ ತೆರಳಿದ್ದನು.
ಮಾರ್ಗಮಧ್ಯೆ ತಮ್ಮದೇ ಸಂಸ್ಥೆಗೆ ಸೇರಿದದ್ದ ಮತ್ತೊಂದು ವಾಹನಕ್ಕೆ ಸ್ವಲ್ಪ ಹಣವನ್ನು ವರ್ಗಾಯಿಸಿ ಉಳಿದ 1.37 ಕೋಟಿ ಹಣದೊಂದಿಗೆ ಕೆಜಿರಸ್ತೆಗೆ ಬಂದಿದ್ದರು. ಕೆ.ಜಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಮುಂದೆ ವಾಹನ ನಿಲ್ಲಿಸಿದಾಗ ಸೆಕ್ಯೂರಿಟಿಗಾರ್ಡ್ ಮೂತ್ರ ವಿಸರ್ಜನೆಗೆಂದು ಕೆಳಗೆ ಇಳಿದಿದ್ದಾಗ ಶಿವಕುಮಾರ್ ಹಾಗೂ ಸಲೀಂ ಬ್ಯಾಂಕ್ ಒಳಗೆ ಹೋಗಿದ್ದರು.
ಇದೇ ಸಮಯವನ್ನು ಕಾಯುತ್ತಿದ್ದ ಚಾಲಕ ಹಣದ ಸಮೇತ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ತಕ್ಷಣ ನಗರದಾದ್ಯಂತ ನಾಕಾಬಂಧಿ ಮಾಡಿ ವಾಹನ ಹಾಗೂ ಚಾಲಕನಿಗಾಗಿ ಶೋಧ ಕೈಗೊಳ್ಳಲಾಗಿತ್ತು. ಚಿಕ್ಕಪೇಟೆಯ ಎಸಿಪಿ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಲಾಗಿದ್ದು , ಈ ತಂಡ ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ ವಾಹನವನ್ನು ಪತ್ತೆಹಚ್ಚಿದ್ದು , 92 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ಚಾಲಕನಿಗಾಗಿ ತನಿಖೆ ಚುರುಕುಗೊಂಡಿದೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download